ನವದೆಹಲಿ: ಕೇಂದ್ರ ಸರ್ಕಾರದ ವಿಶೇಷ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಅಂಗವಾಗಿ 70 ಮಂದಿ ಸಚಿವರು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 9ರಿಂದ ಅಕ್ಟೋಬರ್ 5ರ ವರೆಗೆ ಹಂತ ಹಂತವಾಗಿ ಈ ಭೇಟಿ ನಡೆಯಲಿದೆ.
ಮೊದಲ ಹಂತದಲ್ಲಿ ಸ್ಮೃತಿ ಇರಾನಿ, ಅರ್ಜುನ್ ಮುಂಡಾ, ಮಹೀಂದರ್ ನಾಥ್ ಪಾಂಡೆ ಸೇರಿದಂತೆ 28 ಸಚಿವರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಇವರು ಕೇಂದ್ರಾಡಳಿತ ಪ್ರದೇಶದ ಉದ್ದಗಲಕ್ಕೂ ಸಂಚರಿಸಲಿದ್ದು, ಜನರ ಕುಂದುಕೊರತೆ ಆಲಿಸಲಿದ್ದಾರೆ. ಜತೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಚಿವರು ಜಮ್ಮು–ಕಾಶ್ಮಿರ ಭೇಟಿಯ ಬಳಿಕ ಗೃಹ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ. ಈ ವರದಿಗಳನ್ನು ಪರಿಶೀಲಿಸಿದ ಬಳಿಕ ಗೃಹ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯ ಸಂಬಂಧಪಟ್ಟ ಇಲಾಖೆಗಳಿಗೆ ವರದಿಯನ್ನು ಹಸ್ತಾಂತರಿಸಲಿದ್ದು, ಜಮ್ಮು–ಕಾಶ್ಮೀರ ಆಡಳಿತದೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಲಿವೆ ಎಂದು ಮೂಲಗಳು ಹೇಳಿವೆ.
ಜುಲೈ ಮತ್ತು ಆಗಸ್ಟ್‌ನಲ್ಲಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಸಂಸತ್‌ನ ಮುಂಗಾರು ಅಧಿವೇಶನ ಮತ್ತು ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
370ನೇ ವಿಧಿ ಮತ್ತು 35–ಎ ರದ್ದತಿ ಬಳಿಕ ಜಮ್ಮು–ಕಾಶ್ಮೀರ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಜನರಲ್ಲಿ ಉಂಟುಮಾಡುತ್ತಿರುವ ಭಯವನ್ನು ಹೋಗಲಾಡಿಸಲೂ ಕೇಂದ್ರ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
2020ರ ಜನವರಿಯಲ್ಲಿ ಕೇಂದ್ರದ 36 ಮಂದಿ ಸಚಿವರು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಸ್ಥಾಯಿ ಸಂಸದೀಯ ಸಮಿತಿಯ 13 ಸದಸ್ಯರು ಕಳೆದ ಕೆಲವು ವಾರಗಳಲ್ಲಿ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ಗೆ ಭೇಟಿ ನೀಡಿದ್ದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕೂಡ ಆಗಸ್ಟ್‌ನಲ್ಲಿ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ಗೆ ಒಂದು ವಾರ ಕಾಲ ಭೇಟಿ ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.