ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೇರಿದರೆ 4 ಕಿ.ಮೀ.ಗೊಂದು ಶಾಲೆ: ಮನೀಷ್ ಸಿಸೋಡಿಯಾ

Last Updated 18 ಅಕ್ಟೋಬರ್ 2022, 10:12 IST
ಅಕ್ಷರ ಗಾತ್ರ

ಅಹಮದಾಬಾದ್: ‘ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಅಧಿಕಾರಕ್ಕೆ ಬಂದರೆ, ಒಂದು ವರ್ಷದೊಳಗೆ ಎಂಟು ಪ್ರಮುಖ ನಗರಗಳಲ್ಲಿ ಪ್ರತಿ ನಾಲ್ಕು ಕಿಲೊ ಮೀಟರ್‌ಗೆ ಒಂದು ಸರ್ಕಾರಿ ಶಾಲೆಯನ್ನು ಆರಂಭಿಸುತ್ತೇವೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಎಪಿ ನಡೆಸಿದ ಶಾಲೆಗಳ ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ 48,000 ಸರ್ಕಾರಿ ಶಾಲೆಗಳು ಇವೆ. ಅವುಗಳಲ್ಲಿ 32,000 ಕೆಟ್ಟ ಸ್ಥಿತಿಯಲ್ಲಿವೆ’ ಎಂದು ವಿವರಿಸಿದ್ದಾರೆ.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಅಹಮದಾಬಾದ್, ಸೂರತ್, ವಡೋದರಾ, ಜಾಮ್‌ನಗರ, ರಾಜ್‌ಕೋಟ್, ಭಾವನಗರ, ಗಾಂಧಿನಗರ ಮತ್ತು ಜುನಾಗಢದಲ್ಲಿ ಪ್ರತಿ ನಾಲ್ಕು ಕಿ.ಮೀ.ಗೊಂದು ಸರ್ಕಾರಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಸಿಸೋಡಿಯಾ, ಕೇಂದ್ರೀಯ ತನಿಖಾ ದಳದ (ಸಿಬಿಐ) ಎದುರು ಸೋಮವಾರ ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಗಾಗಿದ್ದರು.

ಸಿಬಿಐ ವಿಚಾರಣೆ ಕುರಿತು ಪ್ರತಿಕ್ರಿಯಿಸಿದರ ಅವರು, ‘ಜೈಲಿಗೆ ಹೋಗಲೂ ತಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಆದರೆ, ಗುಜರಾತ್‌ನಲ್ಲಿ ಶಾಲೆಗಳ ನಿರ್ಮಾಣ ನಿಲ್ಲುವುದಿಲ್ಲ’ ಎಂದಿದ್ದಾರೆ.

ನಾವು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಪ್ರತಿ ನಾಲ್ಕು ಕಿ.ಮೀ.ಗೊಂದು ಭವ್ಯವಾದ ಸರ್ಕಾರಿ ಶಾಲೆಯನ್ನು ನಿರ್ಮಿಸುತ್ತೇವೆ. ಅವು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿರಲಿವೆ ಎಂದು ಸಿಸೋಡಿಯಾ ಭರವಸೆ ನೀಡಿದ್ದಾರೆ.

ನಾವು ಗುಜರಾತ್‌ನಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿದ್ದೇವೆ. ಜತೆಗೆ, ಬಜೆಟ್ ಅನ್ನು ಸಹ ಅಧ್ಯಯನ ಮಾಡಿದ್ದೇವೆ. 27 ವರ್ಷಗಳ ಬಿಜೆಪಿ ಆಡಳಿತದಲ್ಲಿ ಶಾಲೆಗಳ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ರಾಜ್ಯದಲ್ಲಿ 44 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. 53 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟಾರೆ ಒಂದು ಕೋಟಿ ವಿದ್ಯಾರ್ಥಿಗಳ ಭವಿಷ್ಯ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT