ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ- ಗದ್ದಲ ನಡೆಸದೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ವಿಪಕ್ಷ ಕಾರ್ಯತಂತ್ರ

ಸಂಸತ್ ಅಧಿವೇಶನ
Last Updated 5 ಫೆಬ್ರುವರಿ 2023, 21:47 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಜಂಟಿಅಧಿವೇಶನದಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಸೋಮವಾರ ಚರ್ಚೆ ನಡೆಯುವ ಸಂದರ್ಭದಲ್ಲಿ ಗದ್ದಲ ಮಾಡದಿರಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಆದರೆ, ಅದಾನಿ ಸಮೂಹವು ಅಕ್ರಮವಾಗಿ ಷೇರುಗಳ ಮೌಲ್ಯ ಏರಿಕೆ/ಇಳಿಕೆ ಮಾಡಿದೆ ಎನ್ನಲಾದ ಪ್ರಕರಣದಿಂದ ಗಮನ ಬೇರೆಡೆಗೆ ತಿರುಗಿಸದಿರಲೂ ತೀರ್ಮಾನಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದ ಕಾರಣ ಗುರುವಾರ ಮತ್ತು ಶುಕ್ರವಾರ ಕಲಾಪ ನಡೆದಿರಲಿಲ್ಲ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿರುವ ವಿರೋಧ ಪಕ್ಷಗಳ ಸಭೆಯು ಸೋಮವಾರ ಬೆಳಿಗ್ಗೆ ನಡೆಯಲಿದೆ. ಕಲಾಪದಲ್ಲಿ ಸರ್ಕಾರವನ್ನು ಯಾವ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬ ಬಗ್ಗೆ ಕೊನೆಯ ಕ್ಷಣದ ಕಾರ್ಯತಂತ್ರ ಹೆಣೆಯುವುದಕ್ಕಾಗಿ ಈ ಸಭೆ ಕರೆಯಲಾಗಿದೆ. ಸಭೆಯ ಬಳಿಕ, ವಿರೋಧ ಪಕ್ಷಗಳ ಮುಖಂಡರು ಸಂಸತ್ತಿನ ಎದುರು ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಲಿದ್ದಾರೆ.

ಚರ್ಚೆಗೆ ಅವಕಾಶ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಕೆಲವು ಪಕ್ಷಗಳು ಅಭಿಪ್ರಾಯಪಟ್ಟಿವೆ. ಆದರೆ, ಅದಾನಿ ಸಮೂಹದ ಜೊತೆಗೆ ಎಲ್‌ಐಸಿ ಮತ್ತು ಎಸ್‌ಬಿಐ ನಡೆಸಿರುವ ಹಣಕಾಸು ವಹಿವಾಟಿಗೆ ಸಂಬಂಧಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿದ್ದರೆ ಚರ್ಚೆ ನಡೆಯುವುದು ಅಗತ್ಯ ಎಂಬುದು ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳ ಅಭಿಮತ. ಹಾಗಾಗಿ, ‘ಚರ್ಚೆ ಬೇಡ’ ಎನ್ನುತ್ತಿರುವ ಪಕ್ಷಗಳ ಮನವೊಲಿಸಲು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಯತ್ನಿಸಬಹುದು.

ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲಿನ ವಾಗ್ದಾಳಿಯನ್ನು ಕಾಂಗ್ರೆಸ್ ತೀವ್ರ
ಗೊಳಿಸಿದೆ. ಸರ್ಕಾರಕ್ಕೆ ಈ ಪ್ರಕಣರದ ಕುರಿತು ಪ್ರತಿ ದಿನ ಮೂರು ಪ್ರಶ್ನೆ ಕೇಳಲಾಗುವುದು. ‘ನಮಗೂ ಅದಾನಿಗೂ ಏನು ಸಂಬಂಧ’ ಎಂಬುದರ ಹಿಂದೆ ಸರ್ಕಾರವು ಅಡಗಿಕೊಳ್ಳದೆ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಚರ್ಚೆ ನಡೆಯುವುದರ ಕುರಿತು ಬಿಜೆಪಿ ಭೀತಿಯಲ್ಲಿದೆ. ಹಾಗಾಗಿ, ಸರ್ಕಾರದ ವಿರುದ್ಧ ಇರುವ ಯಾವುದೇ ಪಕ್ಷವು ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದರೆ ಆ ಪಕ್ಷವು ಬಿಜೆಪಿಯ ಜೊತೆಗೆ ಒಳ ಒಪ್ಪಂದ ಮಾಡಿ
ಕೊಂಡಿದೆ ಎಂದು ಭಾವಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್‌ ನಾಯಕ ಡೆರೆಕ್‌ ಓ.ಬ್ರಯಾನ್‌ ಹೇಳಿದ್ದಾರೆ.

‘ಬಿಜೆಪಿಗೆ ಭಯವಾಗಿದೆ. ಸಂಸತ್ತಿನಲ್ಲಿ ನಡೆಯುವ ಚರ್ಚೆಯಿಂದ ಪಲಾಯನ ಮಾಡಲು ಆ ಪ‍ಕ್ಷವು ಬಯಸಿದೆ. ರಾಷ್ಟ್ರಪತಿಯವರ ಭಾಷಣದ ಮೇಲೆ ಸೋಮವಾರ ನಡೆಯುವ ಚರ್ಚೆಯು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿಕ್ಕಿರುವ ಅವಕಾಶ. ನಿಕಟ ನಿಗಾ ಇರಿಸಿ. ತೃಣಮೂಲ ಕಾಂಗ್ರೆಸ್‌ಗೆ ಚರ್ಚೆ ಬೇಕಾಗಿದೆ, ಗದ್ದಲ ಬೇಕಾಗಿಲ್ಲ’ ಎಂದು ಡೆರೆಕ್‌ ಟ್ವೀಟ್‌ ಮಾಡಿದ್ದಾರೆ.

ಅದಾನಿ ಪ್ರಕರಣದ ಕುರಿತು ಯಾವ ರೀತಿಯ ತನಿಖೆ ನಡೆಯಬೇಕು ಎಂಬ ಬಗ್ಗೆ ವಿರೋಧ ಪಕ್ಷಗಳಲ್ಲಿ ಸಹಮತ ಇಲ್ಲ. ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂಬುದು ಕೆಲವು ಪಕ್ಷಗಳ ಒತ್ತಾಯ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂಬುದು ಇತರ ಕೆಲವು ಪಕ್ಷಗಳ ಆಗ್ರಹ. ಆದರೆ, ವಿರೋಧ ಪಕ್ಷಗಳ ಒಗ್ಗಟ್ಟಿಗೆ ಈ ಭಿನ್ನಮತವು ಅಡ್ಡಬಂದಿಲ್ಲ.

---

‘ವಿರೋಧ ಪಕ್ಷಗಳ ಅವಕಾಶ’

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಯ ಕುರಿತು ಬ್ರಿಟನ್‌ನ ಮಾಧ್ಯಮ ಸಂಸ್ಥೆ ಬಿಬಿಸಿ ಸಿದ್ಧಪಡಿಸಿರುವ ಸಾಕ್ಷ್ಯಚಿತ್ರವು ವಿವಾದ ಸೃಷ್ಟಿಸಿದೆ. ಅದರ ಜೊತೆಗೆ, ಅದಾನಿ ಪ್ರಕರಣವು ಮೋದಿ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ ಎಂಬುದು ವಿರೋಧ ಪಕ್ಷಗಳ ಅಭಿಮತ. ಹಾಗಾಗಿಯೇ ಚುನಾವಣೆ ಹತ್ತಿರ ಬಂದಿರುವ ಈ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಕೈಬಿಡಬಾರದು ಎಂದು ವಿರೋಧ ಪಕ್ಷಗಳು ಭಾವಿಸಿವೆ.

ಬಿಜೆಪಿವಿರೋಧಿ ಪಕ್ಷಗಳೆಲ್ಲವೂ ಗುರುವಾರ ಮತ್ತು ಶುಕ್ರವಾರ ಸಭೆ ನಡೆಸಿವೆ. ವಿರೋಧ ಪಕ್ಷಗಳೆಲ್ಲವೂ ಒಟ್ಟಾಗಿ ಸರ್ಕಾರದ ಮೇಲೆ ಮುಗಿಬಿದ್ದವು. ಈ ಮೂಲಕ ಸರ್ಕಾರವನ್ನು ಮುಂದೆಯೂ ಇಕ್ಕಟ್ಟಿಗೆ ಸಿಲುಕಿಸಬಹುದೆಂದು ಭಾವಿಸಿವೆ.

ಎಲ್‌ಐಸಿ, ಎಸ್‌ಬಿಐ ಕೇಂದ್ರ ಬಿಂದು

ಅದಾನಿ ಸಮೂಹದ ವಹಿವಾಟು ಕುರಿತಂತೆ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಸಿದ್ಧಪಡಿಸಿರುವ ವರದಿಯಲ್ಲಿ ಷೇರುಮೌಲ್ಯದ ಅಕ್ರಮ ಏರಿಕೆ/ಇಳಿಕೆಯ ವಿವರಗಳಿದ್ದವು. ಆದರೆ, ಇದಕ್ಕಿಂತ ಹೆಚ್ಚಾಗಿ, ಅದಾನಿ ಸಮೂಹದಲ್ಲಿ ಎಲ್‌ಐಸಿ ಮಾಡಿರುವ ಹೂಡಿಕೆ ಮತ್ತು ಅದಾನಿ ಸಮೂಹಕ್ಕೆ ಎಸ್‌ಬಿಐ ನೀಡಿರುವ ಸಾಲದ ಮೇಲೆಯೇ ಗಮನ ಕೇಂದ್ರೀಕರಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದಾನಿ ಸಮೂಹದ ಪ್ರವರ್ತಕರು ಆಪ್ತರು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT