ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿಗೆ ಅಗೌರವ ತೋರಿದ ಸ್ಮೃತಿ ಇರಾನಿ ಕ್ಷಮೆ ಕೇಳಬೇಕು: ಅಧೀರ್ ರಂಜನ್ ಆಗ್ರಹ

ಅಕ್ಷರ ಗಾತ್ರ

ನವದೆಹಲಿ:ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್‌ ಚೌಧರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಗೌರವ ತೋರಿರುವ ಸಚಿವೆ ಸ್ಮೃತಿ ಇರಾನಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ರಾಷ್ಟ್ರಪತಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದ ಚೌಧರಿ, ಬಳಿಕಪತ್ರ ಬರೆದು ಕ್ಷಮೆ ಯಾಚಿಸಿದ್ದರು. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ, ‘ನೀವು ಹೊಂದಿರುವ ಸ್ಥಾನವನ್ನು ವಿವರಿಸುವಾಗ ತಪ್ಪು ಪದವನ್ನು ಬಳಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ. ನಾಲಿಗೆ ತಪ್ಪಾಗಿ ಹೊರಳಿ ಈ ಪ್ರಮಾದವಾಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಇದನ್ನು ಸ್ವೀಕರಿಸಬೇಕೆಂದು ವಿನಂತಿಸುತ್ತೇನೆ’ ಎಂದು ಉಲ್ಲೇಖಿಸಿದ್ದರು.

ಇದೀಗ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ ತಮ್ಮ ಹೇಳಿಕೆ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಚೌಧರಿ ಅವರು, 'ನನಗೆ ಚೆನ್ನಾಗಿಹಿಂದಿ ಮಾತನಾಡಲು ಬಾರದ ಕಾರಣ ಆ ತಪ್ಪಾಗಿತ್ತು. ನನ್ನಿಂದಾದ ತಪ್ಪಿಗೆ ವಿಷಾಧಿಸಿ, ರಾಷ್ಟ್ರಪತಿಯವರಲ್ಲಿ ಕ್ಷಮೆ ಕೇಳಿದ್ದೇನೆ. ಆದಾಗ್ಯೂ ಈ ವಿಚಾರವಾಗಿ ಸ್ಮೃತಿ ಇರಾನಿ ಅವರು ಗೌರವಾನ್ವಿತ ರಾಷ್ಟ್ರಪತಿಯವರ ಹೆಸರನ್ನು ಬಳಸಿದ ರೀತಿಯು ರಾಷ್ಟ್ರಪತಿ ಹುದ್ದೆಯ ಘನತೆಗೆ ಮತ್ತು ಸ್ಥಾನಮಾನಕ್ಕೆ ತಕ್ಕಂತೆ ಇರಲಿಲ್ಲ ಎಂಬುದನ್ನು ತಿಳಿಸಲಿಚ್ಚಿಸುತ್ತೇನೆ' ಎಂದು ಹೇಳಿದ್ದಾರೆ.

'ಅವರು (ಸ್ಮೃತಿ ಇರಾನಿ) ಗೌರವಾನ್ವಿತ ರಾಷ್ಟ್ರಪತಿಯವರ ಹೆಸರನ್ನು ಹೇಳುವ ಮುನ್ನ 'ರಾಷ್ಟ್ರಪತಿ' ಅಥವಾ 'ಮೇಡಂ' ಎಂಬ ಪದ ಬಳಸದೆ ಮತ್ತೆ ಮತ್ತೆ 'ದ್ರೌಪದಿ ಮುರ್ಮು' ಎಂದು ಕೂಗಾಡಿದ್ದಾರೆ. ಇದು ರಾಷ್ಟ್ರಪತಿಯವರ ಸ್ಥಾನಮಾನಕ್ಕೆ ಸ್ಪಷ್ಟವಾಗಿ ಕುಂದುಂಟುಮಾಡಿದೆ' ಎಂದು ಒತ್ತಿ ಹೇಳಿದ್ದಾರೆ. ಹಾಗೆಯೇ, ಇದಕ್ಕಾಗಿ ಸ್ಮೃತಿ ಇರಾನಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಚೌಧರಿ ಅವರ ಹೇಳಿಕೆಯನ್ನು ಖಂಡಿಸಿ ಸಂಸತ್‌ನಲ್ಲಿ ಗುರುವಾರ (ಜು.28) ಪ್ರತಿಭಟನೆ ನಡೆಸಿದ್ದ ಬಿಜೆಪಿ ಸದಸ್ಯರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದರು.

ಆಗ ಬಿಜೆಪಿಯ ಹಿರಿಯ ಸಂಸದೆ ರಮಾದೇವಿ ಅವರ ಬಳಿಗೆ ತೆರಳಿದ ಸೋನಿಯಾ ಗಾಂಧಿ ಅವರು, ನನ್ನನ್ನು ಏಕೆ ಈ ವಿಚಾರದಲ್ಲಿ ಎಳೆದು ತರುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು.ಅಲ್ಲಿಯೇ ಇದ್ದ ಸ್ಮೃತಿ ಇರಾನಿ, ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು. ಆಗ, ತಮ್ಮೊಂದಿಗೆ ಮಾತನಾಡದಂತೆ ಸ್ಮೃತಿಗೆ ಸೋನಿಯಾ ತಾಕೀತು ಮಾಡಿದ್ದರು ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT