ಜೀವನ ಸಂಗಾತಿ ಆಯ್ಕೆ ಅಧಿಕಾರಕ್ಕೆ ಮನೆತನದ ಗೌರವ ಎರವಾಗಬಾರದು: ‘ಸುಪ್ರೀಂ’

ನವದೆಹಲಿ: ‘ಯುವಕ ಅಥವಾ ಯುವತಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಹೊಂದಿದ್ದಾರೆ. ಕುಟುಂಬದ ಗೌರವ, ಕೆಲವೇ ಜನರ ಚಿಂತನೆಯು ಅವರ ಈ ಅಧಿಕಾರವನ್ನು ಬಲಿ ತೆಗೆದುಕೊಳ್ಳಬಾರದು’ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.
‘ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ಜಾತಿ, ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಅಂತರ ಜಾತಿ ವಿವಾಹಗಳು ಅಗತ್ಯ’ ಎಂದು ನ್ಯಾಯಮೂರ್ತಿಗಳಾದ ಸಂಜಯಕಿಶನ್ ಕೌಲ್ ಹಾಗೂ ಹೃಷಿಕೇಶ್ ರಾಯ್ ಅವರಿರುವ ನ್ಯಾಯಪೀಠ ಅಭಿಪ್ರಾಯಪಟ್ಟಿತು.
‘ಅಂತರಜಾತಿ ವಿವಾಹ ಸಾಮಾಜಿಕವಾಗಿ ಬಹಳ ಸೂಕ್ಷ್ಮವಾದ ಸಂಗತಿ. ಇಂತಹ ಪ್ರಕರಣಗಳ ನಿರ್ವಹಣೆಗೆ ಸೂಕ್ತ ಮಾರ್ಗಸೂಚಿಗಳನ್ನು ರಚಿಸಿ, ತರಬೇತಿ ಆಯೋಜಿಸಬೇಕು’ ಎಂದು ನ್ಯಾಯಪೀಠ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿತು.
ಎಂ.ಎ.,ಬಿ.ಇಡಿ ಪದವಿ ಪಡೆದಿರುವ ಬೆಳಗಾವಿ ಮೂಲದ ಯುವತಿ, ಉತ್ತರ ಪ್ರದೇಶ ಮೂಲದ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಪ್ರೀತಿಸಿ, ಮದುವೆಯಾಗಿದ್ದರು. ಪಾಲಕರಿಗೆ ತಿಳಿಸದೇ ಸಹಾಯಕ ಪ್ರಾಧ್ಯಾಪಕನೊಂದಿಗೆ ಹೋಗಿದ್ದರು.
ಈ ಸಂಬಂಧ ಯುವತಿ ತಂದೆ, ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು 2020ರ ಅಕ್ಟೋಬರ್ 14ರಂದು ದೂರು ದಾಖಲಿಸಿದ್ದರು.
ಈ ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ, ಯುವತಿ ಖುದ್ದಾಗಿ ಠಾಣೆಗೆ ಬಂದು ತನ್ನ ಹೇಳಿಕೆ ದಾಖಲಿಸಬೇಕು. ತಪ್ಪಿದಲ್ಲಿ, ಆಕೆ ಪತಿ ವಿರುದ್ಧ ಅಪಹರಣ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು.
ಪೊಲೀಸರ ಈ ಧೋರಣೆಯನ್ನು ಪ್ರಶ್ನಿಸಿ, ಈ ದಂಪತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪೊಲೀಸ್ ಅಧಿಕಾರಿಗಳ ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.