ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಯಲ್ಲಿ 10 ಮೀಟರ್ ದೂರ ಚಿಮ್ಮುತ್ತೆ ಕೊರೊನಾ ವೈರಸ್; ಎರಡು ಮಾಸ್ಕ್‌ ಅವಶ್ಯಕ

Last Updated 20 ಮೇ 2021, 11:51 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪೀಡಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಅಥವಾ ಉಸಿರು ಬಿಟ್ಟಾಗ ಬಾಯಿ ಮತ್ತು ಮೂಗಿನಿಂದ ಹೊರ ಬರುವ ಹನಿಗಳು 2 ಮೀಟರ್‌ ದೂರದವರೆಗೂ ಚಿಮ್ಮಿ ಬೀಳುತ್ತವೆ. ಅದೇ ಹನಿಗಳ ಸಣ್ಣ ಕಣಗಳು (ಏರೋಸಾಲ್‌) ಗಾಳಿಯಲ್ಲಿ 10 ಮೀಟರ್‌ಗಳ ವರೆಗೂ ಸಾಗಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತದಲ್ಲಿ ಕೋವಿಡ್‌–19 ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಹಾಗೂ ಸಾಕಷ್ಟು ಗಾಳಿ ಇರುವಂತೆ ಗಮನಿಸುವುದರ ಕುರಿತು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

'ತೆರೆದ ಸ್ಥಳಗಳಲ್ಲಿ ಅಥವಾ ಹೆಚ್ಚು ಗಾಳಿಯ ಸಂಚಾರ ಇರುವ ಜಾಗದಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಅಪಾಯ ಕಡಿಮೆ ಇರುತ್ತದೆ. ತೆರೆದಿರುವ ಕಿಟಕಿಗಳು, ಬಾಗಿಲುಗಳು, ಫ್ಯಾನ್‌ ಮೂಲಕ ಸಾಕಷ್ಟು ಗಾಳಿಯು ಒಳಗೆ ಮತ್ತು ಹೊರಗೆ ಹೋಗುವ ವ್ಯವಸ್ಥೆಯು ವೈರಸ್‌ ಒಂದೇ ಸ್ಥಳದಲ್ಲಿ ಸೇರದಂತೆ ತಡೆಯುತ್ತದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿಗೆ ರೋಗದ ಲಕ್ಷಣಗಳು ಇಲ್ಲದಿದ್ದರೂ ಅವರಿಂದ ವೈರಸ್‌ ಹರಡಬಹುದಾಗಿರುತ್ತದೆ. ಮುಖ್ಯವಾಗಿ ಬಾಯಿಯಿಂದ ಹೊರ ಬೀಳುವ ಲಾಲಾರಸ (ಸಲೈವಾ) ಮತ್ತು ಮೂಗಿನಿಂದ ಹೊರಬೀಳುವ ಹನಿಗಳು ಸೋಂಕು ಹರಡುವ ಪ್ರಾಥಮಿಕ ಸಾಧ್ಯತೆಯಾಗಿದೆ. ಉಸಿರು ಹೊರಬಿಡುವಾಗ, ಮಾತನಾಡುವಾಗ, ಕೂಗುವಾಗ, ಹಾಡುವಾಗ, ನಗುವಾಗ, ಕೆಮ್ಮವಾಗ ಹಾಗೂ ಸೀನುವಾಗ ವೈರಸ್ ಹೊತ್ತ ಹನಿಗಳು ಚಿಮ್ಮುವ ಸಾಧ್ಯತೆ ಹೆಚ್ಚು. ಹಾಗಾಗಿ, ಎರಡು ಮಾಸ್ಕ್‌ ಧರಿಸುವಂತೆ ಮಾರ್ಗಸೂಚಿಯಲ್ಲಿ ಸಲಹೆ ಮಾಡಲಾಗಿದೆ.

ವೈರಸ್‌ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ತಲುಪಿದಾಗ, ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿ ಸೋಂಕು ವ್ಯಾಪಿಸುತ್ತದೆ. ಮನುಷ್ಯರ ದೇಹವೇ ವೈರಸ್‌ಗೆ ರಕ್ಷಣೆಯಾಗಿರುತ್ತದೆ, ಮನುಷ್ಯರ ದೇಹದಿಂದ ಹೊರಗೆ ವೈರಸ್‌ ಹೆಚ್ಚು ಕಾಲ ಉಳಿಯುವುದಿಲ್ಲ.

ಮಾರ್ಗಸೂಚಿಯಲ್ಲಿರುವ ಕೆಲವು ಪ್ರಮುಖ ಅಂಶಗಳು–

* ಬಾಯಿಯಿಂದ ಹೊರಬರುವ ಹನಿಗಳು 2 ಮೀಟರ್ (6.5 ಅಡಿ) ವರೆಗೂ ಚಿಮ್ಮಿದರೆ, ಹನಿಗಳ ಕಣಗಳು ಗಾಳಿಯಲ್ಲಿ 10 ಮೀಟರ್‌ (32 ಅಡಿಗಳು) ವರೆಗೂ ಸಾಗಬಹುದು
* ಒಟ್ಟಿಗೆ ಎರಡು ಮಾಸ್ಕ್‌ಗಳನ್ನು ಧರಿಸಿ
* ಹತ್ತಿ ಬಟ್ಟೆಯಿಂದ ಮಾಡಿದ ಎರಡು ಪದರಗಳ ಮಾಸ್ಕ್‌ ಉತ್ತಮ
* ಎನ್‌–95 ಮಾಸ್ಕ್‌ ಹೆಚ್ಚಿನ ಸುರಕ್ಷತೆ ನೀಡುತ್ತದೆ
* ಸರ್ಜಿಕಲ್‌ ಮಾಸ್ಕ್‌ನ್ನು ಒಗೆದು ಉಪಯೋಗಿಸಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT