ಕೊಚ್ಚಿ ಕರಾವಳಿಯಲ್ಲಿ ₹1,200 ಕೋಟಿ ಮೌಲ್ಯದ 200 ಕೆಜಿ ಹೆರಾಯಿನ್ ವಶ

ಕೊಚ್ಚಿ: ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು ₹1,200 ಕೋಟಿ ಮೌಲ್ಯದ 200 ಕೆಜಿ ಹೆರಾಯಿನ್ ಹೊಂದಿದ್ದ ಇರಾನ್ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಶುಕ್ರವಾರ ತಿಳಿಸಿದೆ.
ಪ್ರಕರಣ ಸಂಬಂಧ ಇರಾನ್‌ನ ಆರು ಪ್ರಜೆಗಳನ್ನು ಬಂಧಿಸಲಾಗಿದ್ದು, ಹೆರಾಯಿನ್‌ನೊಂದಿಗೆ ಹಡಗನ್ನು ಇಲ್ಲಿನ ಮಟ್ಟಂಚೇರಿ ಬಂದರಿಗೆ ತರಲಾಗಿದೆ ಎಂದು ಎನ್‌ಸಿಬಿ ಡಿಜಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
‘ಹಡಗು ಮತ್ತು 200 ಕೆಜಿ ಹೆರಾಯಿನ್ ಅನ್ನು ಎನ್‌ಸಿಬಿ ವಶಪಡಿಸಿಕೊಂಡಿದೆ. ಇರಾನಿನ ಆರು ಸಿಬ್ಬಂದಿಯನ್ನೂ ಸಹ ಎನ್‌ಡಿಪಿಎಸ್ ಆಕ್ಟ್, 1985ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ’ ಎಂದು ಸಿಂಗ್ ಹೇಳಿದರು,
ಡ್ರಗ್ಸ್ 200 ಪ್ಯಾಕೆಟ್‌ಗಳಲ್ಲಿದ್ದು, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ಮೂಲದ ವಿಶಿಷ್ಟವಾದ ಗುರುತುಗಳು ಮತ್ತು ಪ್ಯಾಕಿಂಗ್ ವಿಶೇಷತೆಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
ಕೆಲವು ಡ್ರಗ್ ಪ್ಯಾಕೆಟ್‌ಗಳಲ್ಲಿ ಸ್ಕಾರ್ಪಿಯನ್ ಸೀಲ್ ಗುರುತುಗಳಿದ್ದರೆ, ಇತರವುಗಳಲ್ಲಿ ಡ್ರ್ಯಾಗನ್ ಸೀಲ್ ಗುರುತುಗಳಿವೆ. ಜಲನಿರೋಧಕ ಏಳು ಲೇಯರ್ ಪ್ಯಾಕಿಂಗ್‌ನಲ್ಲಿ ಡ್ರಗ್ ಪ್ಯಾಕ್ ಮಾಡಲಾಗಿತ್ತು. ವಶಪಡಿಸಿಕೊಂಡ
ಮಾದಕ ದ್ರವ್ಯವನ್ನು ಅಫ್ಗಾನಿಸ್ತಾನದಿಂದ ತರಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೊದಲಿಗೆ ಪಾಕಿಸ್ತಾನಕ್ಕೆ ರವಾನೆ ಮಾಡಲಾಗಿದ್ದು, ಬಳಿಕ ಪಾಕಿಸ್ತಾನದ ಕರಾವಳಿಯ ಮಧ್ಯ ಸಮುದ್ರ ವಿನಿಮಯದಲ್ಲಿ ಈ ಹಡಗಿಗೆ ಲೋಡ್ ಮಾಡಲಾಗಿದೆ ಎಂದು ಎನ್‌ಸಿಬಿ ಹೇಳಿದೆ.
ಶ್ರೀಲಂಕಾದ ಹಡಗಿಗೆ ಡ್ರಗ್ಸ್ ರವಾನೆಗಾಗಿ ಭಾರತದ ಜಲಭಾಗಕ್ಕೆ ಈ ಹಡಗು ಬಂದಿತ್ತು. ಆದರೆ, ಲಂಕಾದ ಹಡಗು ಪತ್ತೆಯಾಗಿಲ್ಲ. ಅದರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎನ್‌ಸಿಬಿ ತಿಳಿಸಿದೆ.
ಹಡಗಿನಲ್ಲಿದ್ದ ಆರೋಪಿಗಳು ಸಮುದ್ರಕ್ಕೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ, ಸರಕುಗಳನ್ನು ನೀರಿನಲ್ಲಿ ಎಸೆಯಲು ಯತ್ನಿಸಿದರು ಎಂದು ಸಿಂಗ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ಹೆರಾಯಿನ್ ಅನ್ನು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಮೂಲಕ ಭಾರತಕ್ಕೆ ಸಾಗಿಸುವುದು ಕಳೆದ ಕೆಲವು ವರ್ಷಗಳಿಂದ ವಿಪರೀತವಾಗಿ ಹೆಚ್ಚಾಗಿದೆ ಎಂದು ಎನ್‌ಸಿಬಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.