ಶನಿವಾರ, ನವೆಂಬರ್ 28, 2020
18 °C

ಕೇರಳ: ಕಸ್ಟಮ್ಸ್‌ ಅಧಿಕಾರಿಗಳಿಂದ ಕೆ.ಟಿ.ಜಲೀಲ್‌ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ತೆರಿಗೆ ವಿನಾಯಿತಿ ಪಡೆಯುವುದಕ್ಕಾಗಿ ತಿರುವನಂತಪುರದಲ್ಲಿರುವ ಯುಎಇ ಕಾನ್ಸುಲೇಟ್‌ ಮುಖಾಂತರ ರಾಜತಾಂತ್ರಿಕ ಮಾರ್ಗದಲ್ಲಿ 18 ಟನ್‌ ಖರ್ಜೂರ ಹಾಗೂ 4.5 ಟನ್‌ ಧಾರ್ಮಿಕ ವಸ್ತುಗಳನ್ನು ಯುಎಇಯಿಂದ ತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್‌ ಅವರನ್ನು ಕಸ್ಟಮ್ಸ್‌ ಇಲಾಖೆಯು ಸೋಮವಾರ ವಿಚಾರಣೆಗೊಳಪಡಿಸಿದೆ.

ಕೊಚ್ಚಿಯಲ್ಲಿರುವ ಕಸ್ಟಮ್ಸ್‌ ಇಲಾಖೆ ಕಚೇರಿಯಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಜಲೀಲ್‌ ಅವರನ್ನು ಕಸ್ಟಮ್ಸ್‌ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಾನ್ಸುಲೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಪ್ನಾ ಸುರೇಶ್‌ ಜೊತೆ ಸಂಪರ್ಕದಲ್ಲಿದ್ದ ಕಾರಣ ಜಲೀಲ್‌ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಈ ಹಿಂದೆ ವಿಚಾರಣಗೊಳಪಡಿಸಿತ್ತು. 

‘ಸಾವಿರ ತನಿಖಾ ಸಂಸ್ಥೆಗಳು ನನ್ನ ವಿರುದ್ಧ ತನಿಖೆ ನಡೆಸಿದರೂ ಅವರಿಗೆ ಸಾಕ್ಷ್ಯಗಳು ದೊರೆಯುವುದಿಲ್ಲ. ಏಕೆಂದರೆ, ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ’ ಎಂದು ವಿಚಾರಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಜಲೀಲ್‌ ಅವರು ಪೋಸ್ಟ್‌ ಮಾಡಿದ್ದಾರೆ. 

ಇದೇ ವೇಳೆ ಕೇರಳ ವಿಶ್ವವಿದ್ಯಾಲಯವು ಜಲೀಲ್‌ ಅವರ ಪಿಎಚ್‌.ಡಿ ಮೇಲೂ ತನಿಖೆ ನಡೆಸುವ ಸಾಧ್ಯತೆ ಇದೆ.‘1921ರಲ್ಲಿ ನಡೆದ ಮಲಬಾರ್‌ ದಂಗೆಯ ಕುರಿತು 2006ರಲ್ಲಿ ನಡೆಸಿದ ಅಧ್ಯಯನದಲ್ಲಿ ಜಲೀಲ್‌ ಅವರ ಕೊಡುಗೆ ಹೆಚ್ಚೇನು ಇಲ್ಲ’ ಎಂದು ಸಂಘಟನೆಯೊಂದು ಆರೋಪಿಸಿ ದೂರು ನೀಡಿತ್ತು. ಈ ಕುರಿತು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಈ ಕುರಿತು ಕ್ರಮ ಕೈಗೊಳ್ಳಲು ವಿಶ್ವವಿದ್ಯಾಲಯದ ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು