ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಯಾಳಂ ಮಾತಾಡಬಾರದೆಂಬ ಸುತ್ತೋಲೆ ರದ್ದು ಮಾಡಿದ ದೆಹಲಿ ಆಸ್ಪತ್ರೆ

Last Updated 6 ಜೂನ್ 2021, 17:56 IST
ಅಕ್ಷರ ಗಾತ್ರ

ನವದೆಹಲಿ: ನರ್ಸ್‌ಗಳು ಕೆಲಸದ ವೇಳೆಯಲ್ಲಿಮಲಯಾಳ ಭಾಷೆಯಲ್ಲಿ ಮಾತನಾಡಬಾರದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುವುದು ಕಡ್ಡಾಯ ಎಂದುದೆಹಲಿಯ ಸರ್ಕಾರಿ ಆಸ್ಪತ್ರೆಯೊಂದು ಶನಿವಾರ ಆದೇಶ ಹೊರಡಿಸಿತ್ತು. ಅದು ವಿವಾದಕ್ಕೀಡಾಗಿ, ಹಲವಾರು ರಾಜಕೀಯ ಮುಖಂಡರು ಮತ್ತು ಜನರಿಂದ ಟೀಕೆಗಳು ವ್ಯಕ್ತವಾಗುತ್ತಲೇ 24 ಗಂಟೆಗಳಲ್ಲಿ ಆದೇಶವನ್ನು ಹಿಂಪಡೆದಿದೆ.

ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಮತ್ತು ಸಿಬ್ಬಂದಿಗೆ ಮಲಯಾಳ ಅರ್ಥವಾಗುವುದಿಲ್ಲ. ನರ್ಸ್‌ಗಳು ಮಲಯಾಳದಲ್ಲಿ ಮಾತನಾಡುವುದರಿಂದ ರೋಗಿಗಳಿಗೆ ಅಸಹಾಯಕ ಭಾವ ಬರುತ್ತದೆ ಎಂಬ ಕಾರಣ ನೀಡಿ ನರ್ಸಿಂಗ್‌ ಅಧೀಕ್ಷಕರು ಮಲಯಾಳ ಬಳಕೆಯನ್ನು ನಿಷೇಧಿಸಿದ್ದರು. ಆಸ್ಪತ್ರೆ ವಿರುದ್ಧ ಟೀಕೆಗಳು ಎದುರಾಗುತ್ತಲೇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತೊಂದು ಆದೇಶ ಹೊರಡಿಸಿದ್ದಾರೆ. ‘ಆಸ್ಪತ್ರೆ ಆಡಳಿತ ಮತ್ತು ದೆಹಲಿ ಸರ್ಕಾರದ ಗಮನಕ್ಕೆ ತರದೇ ನರ್ಸಿಂಗ್‌ ಅಧೀಕ್ಷಕರು ಮಲಯಾಳ ನಿಷೇಧದ ಆದೇಶ ಹೊರಡಿಸಿದ್ದರು. ಆ ಆದೇಶವನ್ನು ಕೂಡಲೇ ಹಿಂಪಡೆಯಲಾಗುತ್ತದೆ’ ಎಂದು ಹೊಸ ಆದೇಶದಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಜೈರಾಮ್‌ ರಮೇಶ್‌ ಮತ್ತು ಶಶಿ ತರೂರ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ, ಬಿಜೆಪಿ ಮುಖಂಡ ಟಾಮ್‌ ವಡಕ್ಕನ್‌ ಮುಂತಾದ ನಾಯಕರು ಆಸ್ಪತ್ರೆಯ ಕ್ರಮವನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ.

‘ಮಲಯಾಳ ಕೂಡಾ ಭಾರತೀಯ ಭಾಷೆ. ಭಾಷಾ ತಾರತಮ್ಯವನ್ನು ನಿಲ್ಲಿಸಿ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ. ಈ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಟ್ವೀಟ್‌ ಮಾಡಿರುವ ಯೆಚೂರಿ, ‘ಇದು ಹಾಸ್ಯಾಸ್ಪದ. ಮಾತನಾಡುವ ಮತ್ತು ಅರ್ಥ ಮಾಡಿಕೊಳ್ಳುವ ಜನರು ಇರುವ ವರೆಗು ದೇಶದ ಯಾವುದೇ ಭಾಷೆಯನ್ನು ನಿಷೇಧಿಸುವಂತಿಲ್ಲ. ಈ ಕ್ರಮವನ್ನು ಹಿಂಪಡೆಯಿರಿ’ ಎಂದಿದ್ದಾರೆ.

ಆಸ್ಪತ್ರೆ ಆದೇಶ ಹಿಂಪಡೆದ ಬಳಿಕ, ಶಶಿ ತರೂರ್‌ ಅವರು ಟ್ವೀಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಸಂಕುಚಿತ ಮನೋಭಾವ ಮತ್ತು ಅಂದಾಭಿಮಾನದ ವಿರುದ್ಧ ಸಭ್ಯತೆ ಮತ್ತು ಸಾಮಾನ್ಯ ತಿಳಿವಳಿಕೆಗೆ ಸಿಕ್ಕಿರುವ ಜಯ ಎಂದಿದ್ದಾರೆ. ಆದೇಶ ಹಿಂಪಡೆಯುವ ಮೊದಲು ಅವರು ಕಠಿಣ ಶಬ್ದಗಳಿಂದ ಆದೇಶವನ್ನು ಟೀಕಿಸಿದ್ದರು.

ಜಿ.ಬಿ. ಪಂತ್ ನರ್ಸ್‌ಗಳ ಸಂಘವು ಪ್ರತಿಕ್ರಿಯೆ ನೀಡಿದೆ. ಸುಮಾರು 850 ನರ್ಸ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 400 ಜನರು ಕೇರಳದವರು ಎಂದಿದೆ. ಇನ್‌ಸ್ಟಿಟ್ಯೂಟ್‌ ಆಫ್‌ ಲಿವರ್‌ ಆ್ಯಂಡ್‌ ಬೈನರಿ ಸೈನ್ಸಸ್‌ ಕೂಡಾ ಇಂಥದ್ದೇ ಆದೇಶವನ್ನುಕಳೆದ ವರ್ಷ ಹೊರಡಿಸಿತ್ತು. ಸಂಸ್ಥೆಯ ಆವರಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವಂತಿಲ್ಲ ಎಂದು ಸಿಬ್ಬಂದಿಗೆ ಹೇಳಿತ್ತು.

ಟ್ವಿಟರ್‌ನಲ್ಲಿ #Malayalam ಟ್ರೆಂಡಿಂಗ್‌

ಮಲಯಾಳಂ ಬಳಸದಂತೆ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಮಾತನಾಡುವಂತೆ ದೆಹಲಿ ಸರ್ಕಾರಿ ಆಸ್ಪತ್ರೆ ಹೊರಡಿಸಿದ್ದ ಸುತ್ತೋಲೆಯು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಭಾನುವಾರ ಬಿರುಗಾಳಿ ಎಬ್ಬಿಸಿತು. ಆಸ್ಪತ್ರೆ ನಡೆಯನ್ನು ಪ್ರಶ್ನಿಸಿ ಹಲವರು ಟ್ವೀಟ್‌ ಮಾಡಿದರು. ಹೀಗಾಗಲಿ #Malayalam ಹ್ಯಾಷ್‌ ಟ್ಯಾಗ್‌ ಭಾನುವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT