ಶನಿವಾರ, ಫೆಬ್ರವರಿ 27, 2021
30 °C

68 ವರ್ಷದ ಗೃಹಿಣಿಯ ಫೋಟೊಶೂಟ್‌ ವೈರಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದಲ್ಲಿ ಸೆಲೆಬ್ರಿಟಿ ಆಗಿರುವ 68 ವರ್ಷದ ಗೃಹಣಿಯೊಬ್ಬರ ಫೊಟೊಶೂಟ್‌ ಒಂದು ವೈರಲ್‌ ಆಗಿದ್ದು, ವಯಸ್ಸು ಯಾವುದಕ್ಕೂ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ. ಸೆಲೆಬ್ರಿಟಿ ನಡೆಯನ್ನು ಹಲವರು ಪ್ರಶ್ನಿಸಿದ್ದು, ಇನ್ನೂ ಕೆಲವರು ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

2016ರಲ್ಲಿ ‘ಒರು ಮುತ್ತಶ್ಶಿ ಕಥ’ ಚಿತ್ರದಲ್ಲಿ ಪಾತ್ರಧಾರಿಯಾಗಿದ್ದ ರಜಿನಿ ಚಾಂಡಿ, ಮಲಯಾಳಂ ಆವೃತ್ತಿಯ ಬಿಗ್‌ಬಾಸ್‌ 2020ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ನಂತರ ಹೆಚ್ಚಿನ ಖ್ಯಾತಿ ಪಡೆದಿದ್ದರು. ಇದೀಗ, ಆಥಿರಾ ಜಾಯ್‌ ಅವರು ಸೆರೆಹಿಡಿದ ಫೊಟೋಶೂಟ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. 

ತನ್ನನ್ನು ಟೀಕಿಸುವವರಿಗೆ ಪ್ರತ್ಯುತ್ತರವಾಗಿ, ತಾವು ಯುವತಿಯಾಗಿದ್ದಾಗ ಫ್ಯಾಷನ್‌ ವಸ್ತ್ರಗಳನ್ನು ಧರಿಸಿಕೊಂಡು ತೆಗೆದಿದ್ದ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ‘ನಾನು ಈ ಪ್ರಾಯದಲ್ಲಿ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ನನ್ನನ್ನು ಟೀಕಿಸುವವರಿಗೆ ಇಲ್ಲ. ಗ್ಲಾಮರಸ್‌ ಆಗಿರುವ ಧಿರಿಸಿನಲ್ಲಿ ನಾನು ನನ್ನ ಪತಿ ಜೊತೆ ಪಾರ್ಟಿಗಳಿಗೆ ಹೋಗುತ್ತಿದ್ದೆ. ಆಗ, ನನ್ನನ್ನು ಈಗ ಟ್ರೋಲ್‌ ಮಾಡುತ್ತಿರುವವರು ಇನ್ನೂ ಹುಟ್ಟಿರಲಿಲ್ಲ’ ಎಂದು ರಜಿನಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. 

‘ನನ್ನ ವಿರುದ್ಧ ಅವಹೇಳನಕಾರಿ ಹಾಗೂ ನಿಂದನೀಯ ಹೇಳಿಕೆಗಳನ್ನು ನೀಡಿದವರೆಲ್ಲರೂ, ನಕಲಿ ಖಾತೆಗಳನ್ನು ಸೃಷ್ಟಿಸಿ ಅಂಥ ಹೇಳಿಕೆಗಳನ್ನು ಪೋಸ್ಟ್‌ ಮಾಡಿದ್ದಾರೆ. ನಿಮ್ಮ ನಿಜವಾದ ಖಾತೆಯಿಂದ ಇಂಥ ಟೀಕೆಗಳನ್ನು ಮಾಡಿ’ ಎಂದು ಅವರು ಸವಾಲೆಸೆದಿದ್ದಾರೆ.‘ನನ್ನ ಬಗ್ಗೆ ಅವರ ಕಾಳಜಿ ಸತ್ಯವಾಗಿದ್ದರೆ, ತಮ್ಮ ನಿಜವಾದ ಗುರುತನ್ನು ಹೇಳಲಿ’ ಎಂದು ವಿಡಿಯೊ ಪೋಸ್ಟ್‌ನಲ್ಲಿ ಅವರು ಹೇಳಿದ್ದಾರೆ.

‘ಜೀವನವನ್ನು ಸಂತೋಷದಿಂದ ಅನುಭವಿಸಲು ವಯಸ್ಸು ಅಡ್ಡಿಯಾಗಬಾರದು ಎನ್ನುವುದು ನನ್ನ ಈ ಫೋಟೊಶೂಟ್‌ ಸಂದೇಶವಾಗಿತ್ತು. ಇತರರಿಗೂ ಇದು ಪ್ರೇರಣೆಯಾಗಲಿ ಎನ್ನುವುದು ನನ್ನ ಯೋಚನೆಯಾಗಿತ್ತು. ನನ್ನನ್ನು ಟ್ರೋಲ್‌ ಮಾಡುವವರು, ನನಗೂ ಒಂದು ಕುಟುಂಬವಿದೆ ಎನ್ನುವುದನ್ನು ಮೊದಲು ತಿಳಿಯಲಿ’ ಎಂದು ಹೇಳಿದ್ದಾರೆ.

ರಜಿನಿ ನಡೆಯನ್ನು ಚಿತ್ರನಿರ್ಮಾಪಕ ಓಮರ್‌ ಲುಲು ಸೇರಿದಂತೆ ಹಲವರು ಬೆಂಬಲಿಸಿದ್ದಾರೆ. ಟ್ರೋಲ್‌ ಮಾಡುವವರಿಗೆ ಮುಖಕ್ಕೆ ಹೊಡೆದಂತೆ ರಜಿನಿ ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು