ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಕಾರರ ಆಕ್ರೋಶ ತಣಿಸಲು ಯತ್ನ, ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾತಿ

ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಭರವಸೆ
Last Updated 18 ಜೂನ್ 2022, 21:18 IST
ಅಕ್ಷರ ಗಾತ್ರ

ನವದೆಹಲಿ: ‘ಅಗ್ನಿಪಥ’ ನೇಮಕಾತಿ ಯೋಜನೆಗೆ ಪ್ರತಿಭಟನಕಾರ ರಿಂದ ವ್ಯಕ್ತವಾಗಿರುವ ಆಕ್ರೋಶವನ್ನು ತಣಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ ನೇಮಕಗೊಂಡ ಅಗ್ನಿವೀರರು 4 ವರ್ಷಗಳ ಅವಧಿ ಪೂರೈಸಿದ ಬಳಿಕ, ವಿವಿಧ ನೇಮಕಾತಿಗಳಲ್ಲಿ ಶೇ 10 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿ ಸಿದೆ. ಜತೆಗೆ, ಸಾರ್ವಜನಿಕ ಉದ್ದಿಮೆಗಳಲ್ಲೂ(ಪಿಎಸ್‌ಯು) ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾ ಗಿದೆ.

ವಿವಿಧ ಅರೆಸೇನಾಪಡೆಗಳು ಹಾಗೂ ಅಸ್ಸಾಂ ರೈಫಲ್ಸ್‌ನ ನೇಮಕಾತಿಯಲ್ಲಿಶೇ 10ರಷ್ಟು ಮೀಸಲಾತಿ ನೀಡುವುದಾಗಿ ಕೇಂದ್ರ ಗೃಹ ಸಚಿವಾಲಯ ಶನಿವಾರ ತಿಳಿಸಿದೆ.

ಸಿಆರ್‌ಪಿಎಫ್ ಹಾಗೂ ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ಅಗ್ನಿವೀರರ ನೇಮಕದ ಗರಿಷ್ಠ ವಯೋಮಿತಿಯನ್ನು 3 ವರ್ಷ ಸಡಿಲಿಸಲು ನಿರ್ಧರಿಸಲಾಗಿದೆ. 18–23 ವಯಸ್ಸಿನವರನ್ನು ಈ ನೇಮಕಾತಿಗಳಲ್ಲಿ ಈಗ ಪರಿಗಣಿಸಲಾಗುತ್ತಿದ್ದು, ಅಗ್ನಿವೀರರಿಗೆ ಮೂರು ವರ್ಷದ ಸಡಿಲಿಕೆ ಇರಲಿದೆ. ಅಗ್ನಿವೀರರ ಮೊದಲ ತಂಡಕ್ಕೆ ಐದು ವರ್ಷ ವಿನಾಯಿತಿ ದೊರೆಯಲಿದೆ.

ಈ ಮಧ್ಯೆ, ರಕ್ಷಣಾ ಸಚಿವಾಲಯದ ನೇಮಕಾತಿಯಲ್ಲಿ ಅಗ್ನಿವೀರರನ್ನು ಪರಿ ಗಣಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಒಪ್ಪಿಗೆ ಸೂಚಿಸಿದ್ದಾರೆ. ರಕ್ಷಣಾ ಸಚಿವಾಲಯ ದಲ್ಲಿರುವ ನಾಗರಿಕ ಹುದ್ದೆಗಳು ಹಾಗೂ ಕರಾವಳಿ ಕಾವಲುಪಡೆಯ ನೇಮ ಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡಲಾಗುವುದು ಎಂದು ರಾಜನಾಥ್ ಸಿಂಗ್ ಅವರ ಕಚೇರಿ ತಿಳಿಸಿದೆ. ಪ್ರಸ್ತುತ ಇರುವ ನಿವೃತ್ತ ಸೈನಿಕರ ಕೋಟಾಕ್ಕೆ ಹೆಚ್ಚುವರಿಯಾಗಿ ಈ ಮೀಸಲಾತಿ ಸೇರ್ಪಡೆಯಾಗಲಿದೆ.

ಮೀಸಲಾತಿ ಅವಕಾಶವನ್ನು ನೀಡಲು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ. ರಕ್ಷಣೆಗೆ ಸಂಬಂಧಿಸಿದ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ತಮ್ಮ ನೇಮಕಾತಿಯಲ್ಲಿ ಅಗ್ನಿವೀರರಿಗೆ ಅವಕಾಶ ನೀಡುವ
ಕುರಿತಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದೂ
ಸಚಿವಾಲಯ ಸೂಚಿಸಿದೆ.

ವಾಣಿಜ್ಯ ಪೆಟ್ರೋಲಿಯಂ ಹಾಗೂ ವಸತಿ ಸಚಿವಾಲಯದ ಅಡಿ ಬರುವ ಸಾರ್ವಜನಿಕ ಉದ್ದಿಮೆಗಳಲ್ಲೂ ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಹರದೀಪ್‌ ಸಿಂಗ್ ಪುರಿ ತಿಳಿಸಿದ್ದಾರೆ.ಯೋಜನೆ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಸಚಿವರು, ಯೋಜನೆಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ವಾಣಿಜ್ಯ ನೌಕೆಗಳ ವಿವಿಧ ಹುದ್ದೆ ಗಳಿಗೆ ಆಯ್ಕೆಯಾಗುವಂತೆ ಅಗ್ನಿವೀರರನ್ನು ಸನ್ನದ್ಧಗೊಳಿಸಲು ಹಡಗು ಹಾಗೂ ಜಲಸಾರಿಗೆ ಸಚಿವಾಲಯ ನಿರ್ಧರಿಸಿದೆ. ಶನಿವಾರ ಪ್ರಕಟಣೆ ಹೊರಡಿಸಿರುವ ಸಚಿವಾಲಯವು, ಅಗ್ನಿವೀರರಿಗೆ ನೌಕಾ ತರಬೇತಿ ಹಾಗೂ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದೆ.

ಅಗ್ನಿಪಥ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವ ನಿರ್ಧಾರವನ್ನು ಗುರುವಾರ ರಾತ್ರಿ ಪ್ರಕಟಿಸಿದ್ದ ಸರ್ಕಾರ,ಪ್ರತಿಭಟನಕಾರರ ಮನವೊಲಿಸಲು ಮುಂದಾಗಿತ್ತು. ಇದೀಗ ವಿವಿಧ ನೇಮಕಾತಿಗಳಲ್ಲಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದೆ. ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ವಿವಿಧ ಇಲಾಖೆಗಳಲ್ಲಿ ಅಗ್ನಿ ವೀರರಿಗೆ ಅವಕಾಶ ನೀಡುವ ಭರವಸೆ ನೀಡಿವೆ.

ಸುಪ್ರೀಂಗೆ ಅರ್ಜಿ: ಅಗ್ನಿಪಥ ಯೋಜನೆ ವಿರೋಧಿಸಿ ನಡೆದಿರುವ ಹಿಂಸಾಚಾರ ಹಾಗೂ ಸಾರ್ವಜನಿಕ ಸೊತ್ತುಗಳಿಗೆ ಮಾಡಲಾಗಿರುವ ಹಾನಿಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸ ಲಾಗಿದೆ. ವಕೀಲ ವಿಶಾಲ್ ತಿವಾರಿ ಎಂಬುವರು ಅರ್ಜಿ ಸಲ್ಲಿಸಿದ್ದು, ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ, ತೆಲಂಗಾಣ, ಬಿಹಾರ, ಹರಿಯಾಣ ಹಾಗೂ ರಾಜ ಸ್ಥಾನ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ಸತತ ನಾಲ್ಕನೇ ದಿನವೂ ಆಕ್ರೋಶ

ಅಗ್ನಿಪಥ ಯೋಜನೆಯ ವಿರುದ್ಧದ ಆಕ್ರೋಶ ಶನಿವಾರವೂ ಮುಂದುವರಿದಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಸೊತ್ತುಗಳ ಮೇಲೆ ಪ್ರತಿಭಟನಕಾರರು ಪ್ರಹಾರ ನಡೆಸಿದ್ದಾರೆ. ಸತತ ನಾಲ್ಕನೇ ದಿನವೂ ಈ ಎರಡು ರಾಜ್ಯಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಒಡಿಶಾ ಮತ್ತು ಜಾರ್ಖಂಡ್‌ನ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.

ರಕ್ಷಣಾ ಪಡೆಗಳಲ್ಲಿನ ಉದ್ಯೋಗದ ಆಕಾಂಕ್ಷಿಗಳುಬಿಹಾರದ ರಾಜಧಾನಿ ಪಟ್ನಾ ಮತ್ತು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗಳಲ್ಲಿ ವ್ಯಾಯಾಮ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಬಿಹಾರದ ತಾರೇ ಗಾನ ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ.

ಜೆಹನಾಬಾದ್‌ನಲ್ಲಿ ಕಲ್ಲು ತೂರಾಟದಲ್ಲಿ ಹಲವು ಪೊಲೀಸರು ಗಾಯ ಗೊಂಡಿದ್ದಾರೆ. ರೈಲ್ವೆ ಪೊಲೀಸ್‌ ಸಿಬ್ಬಂದಿಯ ವಾಹನವೊಂದಕ್ಕೆ ಬೆಂಕಿ ಹಚ್ಚ ಲಾಗಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿಯೂ ನಡೆದಿದೆ. ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ.

ಬಿಹಾರದಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ ಬೆಂಬಲಿಗರು ದಾನಾಪುರದಲ್ಲಿ ಆಂಬುಲೆನ್ಸ್‌ ಒಂದಕ್ಕೆ ಹಾನಿ ಮಾಡಿದ್ದಾರೆ. ಅದರ ಒಳಗೆ ಇದ್ದವರನ್ನೂ ಥಳಿಸಲಾಗಿದೆ. ಜೆಹನಾಬಾದ್‌ನಲ್ಲಿ ಪೊಲೀಸ್ ಹೊರಠಾಣೆಯಲ್ಲಿ ದಾಂದಲೆ ನಡೆಸಲಾಗಿದೆ. ಕೆಲವು ಪೊಲೀಸರು ಗಾಯಗೊಂಡಿದ್ದಾರೆ.

ಪ್ರತಿಭಟನಕಾರರ ಆಕ್ರೋಶಕ್ಕೆ ಗುರಿಯಾಗಿರುವ ಬಿಹಾರ ಬಿಜೆಪಿ ಘಟಕದ ಕಚೇರಿಗೆ ಭಾರಿ ಬಂದೋಬಸ್ತ್ ಒದಗಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಿಯಾಲ್‌ದಹ–ಬಾರಕ್‌ಪುರ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಬಿಹಾರದಲ್ಲಿ ಶನಿವಾರ ರಾತ್ರಿ 8 ಗಂಟೆಯವರೆಗೆ ರೈಲು ಸಂಚಾರ ರದ್ದುಪಡಿಸಲಾಗಿತ್ತು. ಭಾನುವಾರ ಮುಂಜಾನೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ರೈಲು ಸಂಚಾರ ಇರುವುದಿಲ್ಲ. ಜಾರ್ಖಂಡ್‌ನ ಧನಬಾದ್‌, ಮೊರಬಡಿಯಲ್ಲಿ ಜೋರು ಪ್ರತಿಭಟನೆ ನಡೆದಿದೆ. ಬಿಜೆಪಿ ರಾಜ್ಯ ಘಟಕದ ಕಚೇರಿಗೆ ತ್ವರಿತ ಕ್ರಿಯಾ ಪಡೆಯ ಪೊಲೀಸರಿಂದ ರಕ್ಷಣೆ ಒದಗಿಸಲಾಗಿದೆ.

ಸೇನಾ ಮುಖ್ಯಸ್ಥರ ಜತೆ ರಾಜನಾಥ್‌ ಚರ್ಚೆ

ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿ ಕುಮಾರ್ ಮತ್ತು ಭೂಸೇನಾ ಉಪಮುಖ್ಯಸ್ಥ ಬಿ.ಎಸ್‌. ರಾಜು ಅವರ ಜತೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಶನಿವಾರ ಸಭೆ ನಡೆಸಿದ್ದಾರೆ. ‘ಅಗ್ನಿಪಥ’ ಯೋಜನೆಯ ತ್ವರಿತ ಜಾರಿ ಮತ್ತು
ಪ್ರತಿಭಟನಕಾರರ ಮನವೊಲಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಭೂಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಹೈದರಾಬಾದ್‌ ಪ್ರವಾಸದಲ್ಲಿದ್ದ ಕಾರಣ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

ಶನಿವಾರದ ಪ್ರಮುಖ ವಿದ್ಯಮಾನಗಳು

*ವಾಯುಪಡೆಗೆ ಅಗ್ನಿಪಥ ಯೋಜನೆ ಅಡಿ ನೇಮಕಾತಿ ಪ್ರಕ್ರಿಯೆಯು ಇದೇ 24ರಂದು ಆರಂಭವಾಗಲಿದೆ ಎಂದು ವಾಯುಪಡೆಯ ಮುಖ್ಯಸ್ಥ ವಿ.ಆರ್‌.ಚೌಧರಿ ತಿಳಿಸಿದ್ದಾರೆ

*ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸದಸ್ಯರು ಡೆಹ್ರಾಡೂನ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ

*ಅಗ್ನಿಪಥ ಯೋಜನೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಪಂಜಾಬ್‌ ವಿಧಾನಸಭೆ ವಿರೋಧ ಪಕ್ಷದ ನಾಯಕ ಪ್ರತಾಪ್‌
ಸಿಂಗ್ ಬಾಜ್ವಾ ಒತ್ತಾಯಿಸಿದ್ದಾರೆ

*ಒಡಿಶಾದ ನಬರಂಗ್‌ಪುರದ ವ್ಯಕ್ತಿಯೊಬ್ಬರು 60 ಕಿ.ಮೀ. ಓಡಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಬರ್ಹಾಂಪುರದಲ್ಲಿಯೂ ಪ್ರತಿಭಟನೆ ನಡೆದಿದೆ

*ಅಗ್ನಿಪಥದ ವಿರುದ್ಧ ರಾಜಸ್ಥಾನದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿಯ ಮಿತ್ರಪಕ್ಷವಾಗಿದ್ದ ರಾಷ್ಟ್ರೀಯ ಲೋಕ ತಾಂತ್ರಿಕ ದಳ ಹೇಳಿದೆ

*ಶನಿವಾರ 369 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ; ದಕ್ಷಿಣ ಮಧ್ಯ ರೈಲ್ವೆ ಮತ್ತು ಪೂರ್ವ ರೈಲ್ವೆಯ ಹಲವು ರೈಲುಗಳು ಬದಲಿ ಮಾರ್ಗಗಳಲ್ಲಿ ಸಂಚರಿಸಿವೆ

*ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಪೊಲೀಸ್‌ ಜೀಪ್‌ ಮತ್ತು ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಲಾಗಿದೆ

*ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾಚಾರ ಕುರಿತಂತೆ ಸೇನಾ ತರಬೇತಿ ನೀಡುವ ಸಂಸ್ಥೆಯೊಂದರ ಮುಖ್ಯಸ್ಥಅವುಲಾ ಸುಬ್ಬರಾವ್ ಎಂಬುವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸೇನಾ ತರಬೇತಿ ನೀಡುವ ಸಂಸ್ಥೆಗಳು ಹಿಂಸಾಚಾರದಲ್ಲಿ ಭಾಗಿಯಾಗಿವೆಯೇ
ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಿಂಸಾಚಾರಕ್ಕೆ ಮುಖ್ಯಮಂತ್ರಿ ಕಚೇರಿ
ಕುಮ್ಮಕ್ಕು ನೀಡಿದೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದೆ

*ಬಿಹಾರ ಉಪಮುಖ್ಯಮಂತ್ರಿ ರೇಣು ದೇವಿ, ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್
ಸೇರಿದಂತೆ ಬಿಹಾರ ಬಿಜೆಪಿಯ ಹತ್ತು ಮುಖಂಡರಿಗೆ ಸಿಆರ್‌ಪಿಎಫ್‌ ನಿಂದ ವಿಐಪಿ ಭದ್ರತೆ ಒದಗಿಸಲು
ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

ಕಾಂಗ್ರೆಸ್ ‘ಸತ್ಯಾಗ್ರಹ’ ಇಂದು

ನವದೆಹಲಿ: ಅಗ್ನಿಪಥ ಯೋಜನೆ ವಿರುದ್ಧದ ತನ್ನ ಹೋರಾಟವನ್ನು ಕಾಂಗ್ರೆಸ್ ತೀವ್ರಗೊಳಿಸಿದೆ. ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಭಾನುವಾರ ಸತ್ಯಾಗ್ರಹ ಹಮ್ಮಿಕೊಳ್ಳಲು ಪಕ್ಷ ತೀರ್ಮಾನಿಸಿದೆ. ಯೋಜನೆ ವಿರೋಧಿಸಲು ಶಾಂತಿಯುತ ಪ್ರತಿಭಟನಾ ಮಾದರಿ ಅನುಸರಿಸುವಂತೆಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಯುವಜನರಿಗೆ ಶನಿವಾರ ಕರೆ ನೀಡಿದ್ದಾರೆ.

ಜಂತರ್‌ಮಂತರ್‌ನಲ್ಲಿ ನಡೆಯುವ ಪ್ರತಿಭಟನಾ ಧರಣಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಭಾಗಿಯಾಗುವ ನಿರೀಕ್ಷೆಯಿದೆ. ಭಾನುವಾರ ದೆಹಲಿಯಲ್ಲಿ ಇರುವಂತೆ ಸಂಸದರಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT