ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೀಯ ಚುನಾವಣೆ ಮತದಾರ ಪಟ್ಟಿ ಬಹಿರಂಗಪಡಿಸುವುದು ಪದ್ಧತಿಯಲ್ಲ ಎಂದ ಕಾಂಗ್ರೆಸ್

Last Updated 1 ಸೆಪ್ಟೆಂಬರ್ 2022, 1:53 IST
ಅಕ್ಷರ ಗಾತ್ರ

ಆಲಪ್ಪುವ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸಬೇಕು ಎಂಬ ಪಕ್ಷದ ಕೆಲ ನಾಯಕರ ಬೇಡಿಕೆಯನ್ನು ಎಐಸಿಸಿ ಬುಧವಾರ ತಿರಸ್ಕರಿಸಿದೆ.

‘ಇದು ಸಂಪೂರ್ಣ ಆಂತರಿಕ ಪ್ರಕ್ರಿಯೆ. ಅದನ್ನು ಹಾಗೆ ಬಹಿರಂಗಗೊಳಿಸುವಂತಿಲ್ಲ. ಆದರೆ, ಪಕ್ಷದ ಸದಸ್ಯರು ಮತದಾರರ ಪಟ್ಟಿಯ ಪ್ರತಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಯಾವುದೇ ಕಚೇರಿಯಿಂದ ಪಡೆದು ಪರಿಶೀಲಿಸಬಹುದು’ ಎಂದು ಹೇಳಿದೆ.

ಮುಂದಿನ ವಾರ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಮಾಡಲಾಗುತ್ತಿರುವ ವ್ಯವಸ್ಥೆಗಳನ್ನು ಪರಿಶೀಲಿಸಲು ಕೇರಳಕ್ಕೆ ಆಗಮಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ‘ಪಕ್ಷದ ಯಾವುದೇ ಸದಸ್ಯರು ಮತದಾರರ ಪಟ್ಟಿಯ ಪ್ರತಿಯನ್ನು ಯಾವುದೇ ಸ್ಥಳದ ಪಿಸಿಸಿ ಕಚೇರಿಗಳಲ್ಲಿ ಪರಿಶೀಲಿಸಬಹುದು’ ಎಂದು ಹೇಳಿದರು.

‘ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆ ಎಂಬುದು ಆಂತರಿಕ ಪ್ರಕ್ರಿಯೆ. ಇದನ್ನು ಸಾರ್ವಜನಿಕರೆಲ್ಲರೂ ನೋಡುವಂತೆ ಪ್ರಕಟಿಸುವಂತಿಲ್ಲ’ ಎಂದು ವೇಣುಗೋಪಾಲ್ ಆಲಪ್ಪುವದಲ್ಲಿ ಸುದ್ದಿಗಾರರಿಗೆ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಪಿಟಿಐ ಜೊತೆ ಮಾತನಾಡಿರುವ ವೇಣುಗೋಪಾಲ್‌, ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮಧುಸೂದನ್ ಮಿಸ್ತ್ರಿ ಅವರು ಈಗಾಗಲೇ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

‘ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸುವ ಪದ್ಧತಿ ಕಾಂಗ್ರೆಸ್‌ನಲ್ಲಿ ಇಲ್ಲ. ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ವೇಣುಗೋಪಾಲ್ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಕೋರಿಕೆಗಳು ಬುಧವಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಚುನಾವಣೆ ಪ್ರಕ್ರಿಯೆ ಮುಕ್ತ, ನ್ಯಾಯಸಮ್ಮತವಾಗಿ ನಡೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸಬೇಕು ಎಂದು ಪಕ್ಷದ ನಾಯಕರಾದ ಮನೀಶ್ ತಿವಾರಿ, ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ ಅವರು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT