ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ: ವಿವಿಧೆಡೆ ಎನ್‌ಐಎ ಶೋಧ

ಭಯೋತ್ಪಾದನೆಗೆ ನೆರವು: ದಾಳಿ
Last Updated 29 ಅಕ್ಟೋಬರ್ 2020, 1:19 IST
ಅಕ್ಷರ ಗಾತ್ರ

ಶ್ರೀನಗರ/ಬೆಂಗಳೂರು: ಸಮಾಜ ಸೇವೆಯ ಹೆಸರಿನಲ್ಲಿ ದೇಶ, ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ, ಆ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುತ್ತಿದ್ದವು ಎನ್ನಲಾದ ವಿವಿಧ ಸಂಸ್ಥೆಗಳ ಮೇಲೆ ಬುಧವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಮ್ಮು ಕಾಶ್ಮೀರದ ಒಂಬತ್ತು ಕಡೆಗಳಲ್ಲಿ ಹಾಗೂ ಬೆಂಗಳೂರಿನ ಸ್ವಾತಿ ಶೇಷಾದ್ರಿ ಎಂಬುವರ ಮನೆ ಮೇಲೆ ದಾಳಿ ನಡೆದಿದೆ.

ಆರ್.ಟಿ. ನಗರದ ಎಚ್‍ಎಂಟಿ ಕಾಲೊನಿಯಲ್ಲಿರುವ ಸ್ವಾತಿ ಅವರು ಸಂಶೋಧಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅವರ ನಿವಾಸಕ್ಕೆ ಭೇಟಿ ನೀಡಿದ ಎನ್‍ಐಎ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಶೋಧ ನಡೆಸಿದರು. ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್ಸಪಿಯರ್‌ ಪರ್ಸನ್ಸ್ ಆಫ್ ಕಾಶ್ಮೀರ (ಎಪಿಡಿಪಿಕೆ) ಇದರ ಅಧ್ಯಕ್ಷೆ ಪರ್ವೀನಾ ಔಂಗರ್ ಅವರ ಜತೆ ಸ್ವಾತಿ ಅವರಿಗೆ ನಿಕಟ ಸಂಪರ್ಕ ಇತ್ತು ಎಂದು ಶಂಕಿಸಲಾಗಿದೆ. ಈ ಸಂಪರ್ಕ ಹಾಗೂ ದೇಣಿಗೆ ಸಂಗ್ರಹದ ಬಗ್ಗೆ ವಿಚಾರಣೆ ವೇಳೆ ಸ್ವಾತಿ ಅವರಿಂದ ಎನ್‌ಐಎ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದು ಎನ್ಐಎ ಮೂಲಗಳು ಹೇಳಿವೆ.

ಎನ್‌ಐಎ ಅಧಿಕಾರಿಗಳು, ಜೆಕೆಸಿಸಿಎಸ್‍ನ ಖುರ‍್ರಾಂ ಪರ್ವೇಜ್ ಅವರ ಮನೆ, ಕಚೇರಿ ಹಾಗೂ ಸಂಸ್ಥೆಯೊಂದಿಗೆ ಸಂಪರ್ಕವಿರುವ ಪರ್ವೇಜ್ ಅಹಮದ್ ಬುಖಾರಿ, ಪರ್ವೇಜ್ ಅಹಮದ್ ಮಟ್ಟಾ, ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್ಸಪಿಯರ್‌ ಪರ್ಸನ್ಸ್ ಆಫ್ ಕಾಶ್ಮೀರ (ಎಪಿಡಿಪಿಕೆ) ಅಧ್ಯಕ್ಷೆ ಪರ್ವೀನಾ ಔಂಗರ್‌ ಅವರ ಕಚೇರಿ ಮೇಲೂ ದಾಳಿ ನಡೆಸಿದರು. ಪರ್ವೀನಾ ಅವರ ಸಂಪರ್ಕ ಇರುವ ಕಾರಣಕ್ಕೆ ಸ್ವಾತಿ ಅವರ ಮನೆಯಲ್ಲಿ ಶೋಧ ನಡೆಸಲಾಗಿದೆ ಎಂದು ಹೇಳಲಾಗಿದೆ.

ಎನ್‍ಜಿಒ ಹಾಗೂ ಟ್ರಸ್ಟ್ ಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ ದೇಣಿಗೆಯನ್ನು ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ನೀಡುತ್ತಿರುವ ಕುರಿತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು.

ನಾಗವಾರ ಬಳಿಯ ಥಣಿಸಂದ್ರದಲ್ಲಿ ಮತ್ತೊಂದು ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಬುಧವಾರ ಬೆಳಿಗ್ಗೆಯಿಂದ ಹರಡಿತ್ತು. ಆದರೆ, ಅದನ್ನು ಎನ್ಐಎ ಖಚಿತಪಡಿಸಿಲ್ಲ. ಅಂತಹ ಯಾವುದೇ ದಾಳಿ ನಡೆದ ಬಗ್ಗೆ ಮಾಹಿತಿ ಇಲ್ಲ ಎಂದು ಕರ್ನಾಟಕದ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT