ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಹಾಂಗೀರ್‌ಪುರಿ ವಿವಾದ: ಮೋದಿ ಜೊತೆ 'ಕಠಿಣ ವಿಚಾರ'ಗಳ ಬಗ್ಗೆ ಚರ್ಚೆ –ಜಾನ್ಸನ್

Last Updated 22 ಏಪ್ರಿಲ್ 2022, 1:54 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವೇಳೆ 'ಕಠಿಣ ಪರಿಸ್ಥಿತಿಗಳ' ಕುರಿತು ಪ್ರಸ್ತಾಪಿಸುವುದಾಗಿ ಬ್ರಿಟನ್‌ ಪ್ರಧಾನಿಬೋರಿಸ್ ಜಾನ್ಸನ್ ಅವರು ಹೇಳಿದ್ದಾರೆ.ಬೋರಿಸ್‌ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ.

ದೆಹಲಿಯ ವಾಯವ್ಯ ಭಾಗದಲ್ಲಿರುವ ಜಹಾಂಗೀರ್‌ಪುರಿಯ ಪ್ರದೇಶದಲ್ಲಿಬಿಜೆಪಿ ಆಡಳಿತವಿರುವ ಉತ್ತರ ದೆಹಲಿಯ ಮುನ್ಸಿಪಲ್‌ ಕಾರ್ಪೊರೇಷನ್‌ (ಎನ್‌ಡಿಎಂಸಿ) ಅಕ್ರಮ ಕಟ್ಟಣಗಳ ತೆರವುಕಾರ್ಯಾಚರಣೆಯ ಭಾಗವಾಗಿ ಕಟ್ಟಡಗಳನ್ನು ಉರುಳಿಸಲಾಗಿದೆ. ಸ್ಥಳೀಯರ ನಡುವೆ ಕೋಮು ಘರ್ಷಣೆ ನಡೆದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರವನ್ನೂ ಬೋರಿಸ್‌ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಗುಜರಾತ್‌ನ ವಡೋದರಾ ಸಮೀಪದ ಹಲೊಲ್‌ ಕೈಗಾರಿಕಾ ಪ್ರದೇಶದಲ್ಲಿರುವ ಇಂಗ್ಲೆಂಡ್‌ ಮೂಲದ ಬಹುರಾಷ್ಟ್ರೀಯ 'ಜೆಸಿಬಿ' ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ಜಾನ್ಸನ್‌ಬ್ರಿಟನ್‌ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

'ಖಂಡಿತಾ ನಾವು ಯಾವಾಗಲೂ ಕ್ಲಿಷ್ಟಕರವಾದ ವಿಚಾರಗಳನ್ನು ಪ್ರಸ್ತಾಪಿಸುವ ಕೆಲಸ ಮಾಡುತ್ತೇವೆ. ಆದರೆ, ಭಾರತವು 135 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ' ಎಂದು ಜಾನ್ಸನ್‌ ಹೇಳಿರುವುದಾಗಿ 'ಗಾರ್ಡಿಯನ್‌' ಪತ್ರಿಕೆ ವರದಿ ಮಾಡಿದೆ.

ದೆಹಲಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ 'ಜೆಸಿಬಿ' ಕಂಪೆನಿಯ ವಾಹನಗಳನ್ನು ಬಳಸಲಾಗಿತ್ತು.ಇದೇ ವೇಳೆ ಜಾನ್ಸನ್‌ ಅವರು ಕಾರ್ಖಾನೆಗೆ ಭೇಟಿ ನೀಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಆದಾಗ್ಯೂ ಜಾನ್ಸನ್‌ ಅವರು,ಹಲೊಲ್‌ನಲ್ಲಿರುವ ಘಟಕವನ್ನು 'ಭಾರತ ಮತ್ತು ಬ್ರಿಟನ್‌ ಸಂಬಂಧದ ಬಳ್ಳಿ ಜೀವಂತವಾಗಿರುವುದದ ಸಂಕೇತ' ಎಂದು ಬಿಂಬಿಸಿದ್ದಾರೆ.

'ಇದು ಪ್ರಪಂಚದ ಪ್ರಮುಖ ಕಾರ್ಖಾನೆಯಾಗಿದ್ದು, ಬ್ರಿಟನ್ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಪ್ರತಿ ವರ್ಷ 6 ಲಕ್ಷ ಯಂತ್ರಗಳು ತಯಾರಾಗುತ್ತಿವೆ. ಇವನ್ನು 110 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಜಾನ್ಸನ್‌ ಅವರ ಕನ್ಸರ್ವೇಟಿವ್‌ ಪಕ್ಷಕ್ಕೆ'ಜೆಸಿಬಿ' ಮುಖ್ಯಸ್ಥ ಅಂಥೋನಿ ಬ್ಯಾಮ್‌ಫೋರ್ಡ್‌ ಅವರೂ ದೇಣಿಗೆ ನೀಡುತ್ತಾರೆ. ಈ ಕಾರಣದಿಂದಜಾನ್ಸನ್‌ ಅವರು ಕಾರ್ಖಾನೆಗೆ ಭೇಟಿ ನೀಡಿದ್ದಾರೆಯೇ ಎಂದು ಬ್ರಿಟನ್‌ ಮಾಧ್ಯಮಗಳು ಪ್ರಶ್ನಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಂಥೋನಿ, 'ಅಂಥದ್ದೇನಿಲ್ಲ. ಜೆಸಿಬಿ ಕಾರ್ಖಾನೆಯು ಯುಕೆ ವ್ಯವಹಾರ ಶೈಲಿಯ ಉತ್ತಮ ನಿದರ್ಶನವಾಗಿದೆ. ಎರಡೂ ದೇಶಗಳಿಗೆ (ಭಾರತ ಮತ್ತು ಬ್ರಿಟನ್‌) ಪ್ರಯೋಜನಕಾರಿಯಾಗುವ ರೀತಿಯಲ್ಲಿ ಕಂಪೆನಿಯು ಭಾರತ ಮತ್ತುಭಾರತ ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವುದರಿಂದ ಜಾನ್ಸನ್‌ ಇಲ್ಲಿಗೆ ಆಗಮಿಸಿದ್ದಾರೆ' ಎಂದಿದ್ದಾರೆ.

ದೆಹಲಿಯ ಜಹಾಂಗಿರ್‌ಪುರಿ ಪ್ರದೇಶದಲ್ಲಿಹನುಮ ಜಯಂತಿಯಂದು ಕಲ್ಲು ತೂರಾಟ ನಡೆದಿತ್ತು. ಇದು ಕೋಮುಗಲಭೆಗೆ ಕಾರಣವಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಈ ಪ್ರದೇಶದಲ್ಲಿನ ಆಡಳಿತವು, ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಎರಡು ವಾರಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆಯೂ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT