ಶುಕ್ರವಾರ, ಜುಲೈ 1, 2022
22 °C

ಕಾಂಗ್ರೆಸ್ ತೊರೆಯುವ ನಿರ್ಧಾರ ಅಂತಿಮ: ಅಮರಿಂದರ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಪಕ್ಷದ ಹಿರಿಯ ಮುಖಂಡರು ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳನ್ನು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಲ್ಲಗಳೆದಿದ್ದಾರೆ. ಹೊಂದಾಣಿಕೆಯ ಸಮಯ ಮುಗಿದಿದೆ ಮತ್ತು ಪಕ್ಷವನ್ನು ತೊರೆಯುವ ನನ್ನ ನಿರ್ಧಾರ ಅಂತಿಮವಾಗಿದೆ ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ತನ್ನ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಪುನರುಚ್ಚರಿಸಿದ ಸಿಂಗ್,‘ಪಂಜಾಬ್‌ನ ಹಿತಾಸಕ್ತಿಗಾಗಿ ಬಲವಾದ ಸಾಮೂಹಿಕ ಶಕ್ತಿಯನ್ನು ನಿರ್ಮಿಸಲು ಬಯಸುತ್ತೇನೆ’ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗುವ ಮಾತುಕತೆಯ ಬಗ್ಗೆ ತಪ್ಪಾಗಿ ವರದಿಯಾಗಿದೆ. ಹೊಂದಾಣಿಕೆಯ ಸಮಯ ಮುಗಿದಿದೆ. ಪಕ್ಷದಿಂದ ದೂರವಾಗುವ ನಿರ್ಧಾರವನ್ನು ಬಹಳ ಯೋಚಿಸಿದ ನಂತರ ತೆಗೆದುಕೊಳ್ಳಲಾಗಿದೆ ಮತ್ತು ಅದು ಅಂತಿಮವಾಗಿದೆ. ಅವರ ಬೆಂಬಲಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜಿ ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ, ಈಗ ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಉಲ್ಲೇಖಿಸಿ ಅವರ ಮಾಧ್ಯಮ ಸಲಹೆಗಾರ ಟ್ವೀಟ್ ಮಾಡಿದ್ದಾರೆ.

ಕೆಲವು ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಉಳಿಯುವಂತೆ ಮನವೊಲಿಸಲು ಸಿಂಗ್ ಜೊತೆ ಮಾತುಕತೆಯಲ್ಲಿ ತೊಡಗಿದ್ದಾರೆ ಎಂಬ ಕೆಲವು ಮಾಧ್ಯಮ ವರದಿಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಶೀಘ್ರದಲ್ಲೇ ನನ್ನ ಸ್ವಂತ ಪಕ್ಷವನ್ನು ಪ್ರಾರಂಭಿಸುತ್ತೇನೆ ಮತ್ತು ರೈತರ ಸಮಸ್ಯೆ ಬಗೆಹರಿದ ನಂತರ 2022 ರಲ್ಲಿ ಪಂಜಾಬ್ (ಅಸೆಂಬ್ಲಿ) ಚುನಾವಣೆಗೆ ಬಿಜೆಪಿ, ಅಕಾಲಿದಳದ ಬಣಗಳು ಮತ್ತು ಇತರರೊಂದಿಗೆ ಸೀಟು ಹಂಚಿಕೆಗಾಗಿ ಮಾತುಕತೆ ನಡೆಸುತ್ತೇನೆ. ಪಂಜಾಬ್ ಮತ್ತು ರೈತರ ಹಿತಾಸಕ್ತಿಗಾಗಿ ಪ್ರಬಲವಾದ ಸಮೂಹವನ್ನು ನಿರ್ಮಿಸಲು ಬಯಸುತ್ತೇನೆ’ಎಂದು ಸಿಂಗ್ ಹೇಳಿದ್ದಾರೆ.

ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಗೆ ಅನುಮೋದನೆ ನೀಡಿದ ಬಳಿಕ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಮಾಜಿ ಮುಖ್ಯಮಂತ್ರಿ ಬುಧವಾರ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು