ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ಅವರಿಂದ ಗಂಗೂಲಿ ಭೇಟಿ ಸಾಧ್ಯತೆ

Last Updated 5 ಮೇ 2022, 14:05 IST
ಅಕ್ಷರ ಗಾತ್ರ

ಕೋಲ್ಕತ್ತ: ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ದೆಹಲಿಗೆ ಹಿಂದಿರುಗುವ ಮೊದಲು ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರನ್ನು ಭೇಟಿಯಾಗಲಿದ್ದಾರೆ.

‘ಗೃಹ ಸಚಿವರು ಶುಕ್ರವಾರ ಸಂಜೆ ವಿಕ್ಟೋರಿಯಾ ಸ್ಮಾರಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಅವರು ಬೆಹಾಲಾದಲ್ಲಿರುವ ಗಂಗೂಲಿ ಅವರ ನಿವಾಸಕ್ಕೆ ತೆರಳಿ ಅಲ್ಲಿ ಭೋಜನ ಸ್ವೀಕರಿಸುವ ಸಾಧ್ಯತೆಗಳಿವೆ. ಅವರ ಜೊತೆಗೆ ರಾಜ್ಯಸಭೆಯ ಬಿಜೆಪಿ ಸದಸ್ಯ ಸ್ವಪನ್ ದಾಸ್‌ಗುಪ್ತಾ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಇರಲಿದ್ದಾರೆ,’ ಎಂದು ಗೌಪ್ಯತೆಯ ಷರತ್ತಿನ ಆಧಾರದ ಮೇಲೆ ಬಿಜೆಪಿ ನಾಯಕರೊಬ್ಬರು ಸುದ್ದಿ ಸಂಸ್ಥೆ ‘ಐಎಎನ್‌ಎಸ್‌’ಗೆ ಮಾಹಿತಿ ನೀಡಿದ್ದಾರೆ.

ಗಂಗೂಲಿ ಅವರ ಪತ್ನಿ, ಖ್ಯಾತ ಒಡಿಸ್ಸಿ ನೃತ್ಯಗಾರ್ತಿಯೂ ಆದ ಡೋನಾ ಗಂಗೂಲಿ ಅವರು ಶುಕ್ರವಾರ ವಿಕ್ಟೋರಿಯಾ ಸ್ಮಾರಕದಲ್ಲಿ ಪ್ರದರ್ಶನ ನೀಡಲಿದ್ದಾರೆ.

ರಾಜ್ಯಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಅಮಿತ್‌ ಶಾ ಅವರು ಒಂದಿಬ್ಬರು ಖ್ಯಾತನಾಮರನ್ನು ಭೇಟಿಯಾಗಿಯೇ ದೆಹಲಿಗೆ ಹಿಂದಿರುಗುತ್ತಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಅಮಿತ್‌ ಶಾ ಅವರ ಪುತ್ರ ಜಯ್ ಶಾ ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ.

2021ರ ಪಶ್ಚಿಮ ಬಂಗಾಳವಿಧಾನಸಭೆ ಚುನಾವಣೆಗೂ ಮುನ್ನ ಗಂಗೂಲಿ ಬಿಜೆಪಿ ಸೇರಬಹುದು ಎಂಬ ವದಂತಿ ಹಬ್ಬಿತ್ತು.

2021ರ ವಿಧಾನಸಭೆ ಚುನಾವಣೆಗೂ ಮುನ್ನ ಶಾ ಕೋಲ್ಕತ್ತಾದಲ್ಲಿದ್ದಾಗ ಗಂಗೂಲಿ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT