ಶುಕ್ರವಾರ, ಅಕ್ಟೋಬರ್ 7, 2022
28 °C

ಮೂಸೆವಾಲಾ ಹಂತಕರನ್ನು ಜೀವಂತವಾಗಿ ಹಿಡಿಯಬೇಕು ಎಂದುಕೊಂಡಿದ್ದೆವು: ಪಂಜಾಬ್ ಪೊಲೀಸ್

ಪಿಟಿಐ Updated:

ಅಕ್ಷರ ಗಾತ್ರ : | |

ಅಮೃತಸರ: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌ಗಳನ್ನು ಜೀವಂತವಾಗಿ ಹಿಡಿಯಬೇಕು ಎಂದುಕೊಂಡಿದ್ದೆವು. ಹಾಗಾಗಿ ಶರಣಾಗವಂತೆ ಅವರಿಗೆ ಸೂಚಿಸಿದ್ದೆವು ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ಶರಣಾಗುವಂತೆ ನೀಡಿದ್ದ ಸೂಚನೆಯನ್ನು ಲೆಕ್ಕಿಸದೆ, ಗ್ಯಾಂಗ್‌ಸ್ಟರ್‌ಗಳಾದ ಜಗರೂಪ್‌ ಸಿಂಗ್‌ ರೂಪ ಹಾಗೂ ಮನ್‌ಪ್ರಿತ್‌ ಸಿಂಗ್ ಅಲಿಯಾಸ್‌ ಮನ್ನು ಕುಸಾ ಬುಧವಾರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಪ್ರತಿದಾಳಿ ಆರಂಭಿಸಿದ್ದರು. ಸುಮಾರು ಐದು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ ಜಗರೂಪ್‌ ಹಾಗೂ ಮನ್ನು ಹತ್ಯೆಯಾಗಿದ್ದರು. ಭಾರತ–ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಅಮೃತಸರದ ಭಕ್ನಾ ಜಿಲ್ಲೆಯ ಕಟ್ಟಡವೊಂದರಲ್ಲಿ ಅವರು ಅಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಮೃತಸರ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಎಂ.ಎಸ್‌. ಭುಲ್ಲಾರ್‌ ಅವರು ಎನ್‌ಕೌಂಟರ್‌ ಕುರಿತು ಮಾತನಾಡಿದ್ದು, 'ಅವರನ್ನು (ಗ್ಯಾಂಗ್‌ಸ್ಟರ್‌ಗಳನ್ನು) ಜೀವಂತವಾಗಿ ಸೆರೆಹಿಡಿಯಬೇಕು ಎಂದುಕೊಂಡಿದ್ದೆವು. ಅದಕ್ಕಾಗಿ ಶರಣಾಗುವ ಅವಕಾಶ ನೀಡಿದ್ದೆವು. ಆದರೆ, ಅವರು ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನಡೆಸಿದ ಪ್ರತಿದಾಳಿ ವೇಳೆ ಮೃತಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್: ಸಿಧು ಮೂಸೆವಾಲಾ ಹತ್ಯೆ ಗ್ಯಾಂಗ್‌ಸ್ಟರ್ ವಿರುದ್ಧ ಎನ್‌ಕೌಂಟರ್

ಮರಣೋತ್ತರ ಪರೀಕ್ಷೆ ಸಲುವಾಗಿ ಶವಗಳನ್ನು ಅಮೃತಸರ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಗುಂಡಿನ ಚಕಮಕಿ ವೇಳೆ ಮೂವರು ಪೊಲೀಸರು ಮತ್ತು ಪತ್ರಕರ್ತರೊಬ್ಬರು ಸಹ ಗಾಯಗೊಂಡಿದ್ದಾರೆ.

ಪಂಜಾಬ್‌ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು