ಮಂಗಳವಾರ, ಮಾರ್ಚ್ 21, 2023
25 °C

ಗಡಿಯಲ್ಲಿ ಮತ್ತೊಂದು ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌ ಸಿಬ್ಬಂದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚಂಡೀಗಢ: ಭಾರತ ಗಡಿ ಪ್ರವೇಶಿಸುತ್ತಿದ್ದ ಡ್ರೋನ್‌ ಒಂದನ್ನು ಪಂಜಾಬ್‌ನ ಭಾರತ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

‘ಶುಕ್ರವಾರ ಬೆಳಗ್ಗೆ 7.45ರ ಸುಮಾರಿಗೆ ಅಮೃತಸರ ಸೆಕ್ಟರ್‌ನ 22ರಲ್ಲಿ ಪ್ರವೇಶಿಸುತ್ತಿದ್ದ ಡ್ರೋನ್‌ವೊಂದನ್ನು ಬಿಎಸ್‌ಎಫ್‌ ಸಿಬ್ಬಂದಿ ಹೊಡೆದುರುಳಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಮೃತಸರದ ಪುಲ್ಮೋರನ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಮಾದಕವಸ್ತು ಕಳ್ಳಸಾಗಣೆ ಉದ್ದೇಶದಿಂದ ಭಾರತದ ಗಡಿ ಪ್ರವೇಶಿಸಿದ್ದ ಡ್ರೋನ್‌ ಒಂದನ್ನು ಗಡಿ ಬಳಿ ಬುಧವಾರ ಬಿಎಸ್‌ಎಫ್‌ ಸಿಬ್ಬಂದಿ ಹೊಡೆದುರುಳಿಸಿದ್ದರು.

‘ಅಮೃತಸರದ ದಾವೊಕೆ ಸೇನಾ ನೆಲೆ ಬಳಿ ಡ್ರೋನ್‌ ಹೊಡೆದುರುಳಿಸಲಾಯಿತು. ಅದು ಪಾಕಿಸ್ತಾನದ ಗಡಿ ಒಳಗೆ ಬಿದ್ದಿತು. ಪಾಕಿಸ್ತಾನಿ ಸೈನಿಕರು ಅದನ್ನು ತೆಗೆದುಕೊಂಡು ಹೋದರು. ಡ್ರೋನ್‌ ಹಾರಾಡಿದ ಪ್ರದೇಶದಲ್ಲಿ ಪರಿಶೀಲಿಸಿದಾಗ ಭಾರೊಪಾಲ್‌ ಗ್ರಾಮದ ಗಡಿಯಲ್ಲಿ 4.3 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ. ಡ್ರೋನ್‌ ಮೂಲಕವೇ ಇದನ್ನು ಭಾರತದ ಗಡಿಯೊಳಗೆ  ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ವಕ್ತಾರರು ತಿಳಿಸಿದ್ದರು. 

ಮಾದಕವಸ್ತು ವಶ: ಭಾರತ–ಪಾಕಿಸ್ತಾನ ಅಂತರ ರಾಷ್ಟ್ರೀಯ ಗಡಿಯ ಗಟ್ಟಿ ಅಜೈಬ್‌ ಸಿಂಗ್‌ ಗ್ರಾಮದ ಕೃಷಿ ಭೂಮಿಯಲ್ಲಿ 25 ಕಿಲೋಗ್ರಾಂ ಶಂಕಿತ ಹೆರಾಯಿನ್‌ನನ್ನು ಬಿಎಸ್‌ಎಫ್‌ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದರು. 

ಗಡಿ ನಿಗದಿಪಡಿಸುವ ಬೇಲಿ ಬಳಿ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಪಾಕಿಸ್ತಾನ ಕಳ್ಳಸಾಗಣೆದಾರರ ಮೇಲೆ ಗುಂಡು ಹಾರಿಸಿದರು. ಆದರೆ ಅವರು ತಪ್ಪಿಸಿಕೊಂಡರು. ಸ್ಥಳದಲ್ಲಿ 25 ಪೊಟ್ಟಣ ಹೆರಾಯಿನ್‌ ಎನ್ನಲಾದ ವಸ್ತು ಸಿಕ್ಕಿದೆ ಎಂದು ಎಂದು  ವಕ್ತಾರರು ತಿಳಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು