ಮಂಗಳವಾರ, ಮಾರ್ಚ್ 28, 2023
30 °C
ಪಂಜಾಬ್‌ ಉಸ್ತುವಾರಿ ರಾವತ್‌ ಭೇಟಿ ಬಳಿಕ ಸಿ.ಎಂ ಅಮರಿಂದರ್‌ ಸಿಂಗ್‌ ಹೇಳಿಕೆ

‘ಸೋನಿಯಾ ಗಾಂಧಿ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧ’: ಅಮರಿಂದರ್‌ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ‘ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೈಗೊಳ್ಳುವ ಯಾವುದೇ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುವ ರೀತಿ ಇರಲಿದೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಶನಿವಾರ ಇಲ್ಲಿ ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಅವರನ್ನು ಭೇಟಿ ಮಾಡಿದ ನಂತರ ಅವರು ಮಾತನಾಡಿದರು.

ಮುಖಂಡ ನವಜೋತ್‌ ಸಿಂಗ್‌ ಸಿಧು ಅವರನ್ನು ಪಕ್ಷದ ಪಂಜಾಬ್‌ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

‘ಹರೀಶ್‌ ರಾವತ್‌ ಅವರೊಂದಿಗಿನ ಮಾತುಕತೆ ಫಲಪ್ರದವಾಗಿತ್ತು. ನಾನು ಕೆಲವು ವಿಷಯಗಳನ್ನುಈ ಭೇಟಿ ವೇಳೆ ಪ್ರಸ್ತಾಪಿಸಿದೆ. ಅವುಗಳನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು’ ಎಂದು ಅವರು ಟ್ವೀಟ್‌ ಸಹ ಮಾಡಿದ್ದಾರೆ.

ಅಮರಿಂದರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ಸಿಧು ಅವರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಹರೀಶ್ ರಾವತ್‌ ಅವರು ಚಂಡೀಗಡಕ್ಕೆ ದೌಡಾಯಿಸಿದ್ದು, ಪಕ್ಷದ ಬೆಳವಣಿಗೆಗಳ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಅಮರಿಂದರ್‌ ಸಿಂಗ್‌ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಪಕ್ಷದಲ್ಲಿನ ಬೆಳವಣಿಗೆ ಕುರಿತು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸುವ ಯತ್ನವೂ ರಾವತ್‌ ಅವರ ಭೇಟಿಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು