ಮಂಗಳವಾರ, ಸೆಪ್ಟೆಂಬರ್ 21, 2021
21 °C
ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧ l ಭಾರತದ ಶಾಂತಿ ಪ್ರಸ್ತಾವಕ್ಕೆ ಚೀನಾ ಮೌನ

ಸೇನಾ ಮುಖ್ಯಸ್ಥರು ಗಡಿಗೆ ದೌಡು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಸೃಷ್ಟಿಯಾಗಿರುವ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದೆ. ಬ್ರಿಗೇಡ್‌ ಕಮಾಂಡರ್‌ ಮಟ್ಟದಲ್ಲಿ ಸತತ ನಾಲ್ಕು ದಿನ ನಡೆದ ಮಾತುಕತೆಯಲ್ಲಿ ಯಾವುದೇ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ.

ಭೂಸೇನಾ ಮುಖ್ಯಸ್ಥ ಜ.ಎಂ.ಎಂ. ನರವಣೆ ಅವರು ಲಡಾಖ್‌ಗೆ ಗುರುವಾರ ಭೇಟಿ ಕೊಟ್ಟು ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ವಾಯುಪಡೆಯ ಮುಖ್ಯಸ್ಥ ಆರ್‌.ಕೆ.ಎಸ್‌. ಬದೌರಿಯಾ ಅವರು, ಚೀನಾದ ಜತೆಗೆ ಗಡಿ ಹಂಚಿಕೊಂಡಿರುವ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಾಯುನೆಲೆಗಳಿಗೆ ದಿಢೀರ್‌ ಭೇಟಿ ಕೊಟ್ಟಿದ್ದಾರೆ. ಸದಾ ಸಜ್ಜಾಗಿರಲು ಅವರು ವಾಯುಪಡೆ ಯೋಧರಿಗೆ ಸೂಚನೆ ಕೊಟ್ಟಿದ್ದಾರೆ. 

ಈ ಮಧ್ಯೆ, ಎಲ್‌ಎಸಿಯಲ್ಲಿ ನಾಲ್ಕು ತಿಂಗಳಿಂದ ನಿರ್ಮಾಣವಾಗಿರುವ ತ್ವೇಷಮಯ ವಾತಾವರಣ ಕೊನೆಗಾಣಿಸಿ, ಶಾಂತಿ ಸ್ಥಾಪಿಸಲು ಮಾತುಕತೆಯೊಂದೇ ದಾರಿ ಎಂದು ಭಾರತವು ಚೀನಾಕ್ಕೆ ಹೊಸ ಸಂದೇಶ ರವಾನಿಸಿದೆ.

ಪೂರ್ವ ಲಡಾಖ್‌ನ ವಿವಾದಿತ ಗಡಿ ಪ್ರದೇಶದ ಸಂಘರ್ಷಮಯ ಸ್ಥಿತಿಗೆ ಚೀನಾ ಸೇನೆಯ ಏಕಪಕ್ಷೀಯ ವರ್ತನೆಯೇ ಕಾರಣ ಎಂದು ಭಾರತ ಆರೋಪಿಸಿದೆ.ಗಡಿಯಲ್ಲಿ ನಿಯೋಜಿಸಿರುವ ಸೇನೆಯನ್ನು ಕೂಡಲೇ ವಾಪಸ್‌ ಕರೆಸಿಕೊಳ್ಳುವ ಮೂಲಕ ಶಾಂತಿ ಸ್ಥಾಪನೆ ಯತ್ನಗಳಿಗೆ ಕೈಜೋಡಿಸುವಂತೆ ಭಾರತ ಮನವಿ ಮಾಡಿದೆ.

ಆದರೆ, ಭಾರತದ ಈ ಪ್ರಸ್ತಾವನೆಗೆ ಬೀಜಿಂಗ್‌ನಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಹೊಸದಾಗಿ 108 ಚೀನಾ ಆ್ಯಪ್‌ಗಳನ್ನು ನಿಷೇಧಿಸಿರುವ ಭಾರತ ಸರ್ಕಾರದ ಕ್ರಮವನ್ನು ಚೀನಾದ ವಿದೇಶಾಂಗ ಮತ್ತು ವಾಣಿಜ್ಯ ಸಚಿವಾಲಯಗಳು ಕಟುವಾಗಿ ಟೀಕಿಸಿವೆ.

ಪರಿಸ್ಥಿತಿ ಉದ್ವಿಗ್ನ: ಸೇನೆ ಜಮಾವಣೆ ಗಡಿಯಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು ಎರಡೂ ಕಡೆಯ ಸೇನೆಯು ಜಮಾವಣೆಗೊಳ್ಳುತ್ತಿದೆ. ಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸಲಾಗುತ್ತಿದೆ.  

ನರವಣೆ ಅವರು ಎರಡು ದಿನ ಲಡಾಖ್‌ನಲ್ಲಿ ಇರಲಿದ್ದಾರೆ. ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದ ಚುಶುಲ್‌ ಪ್ರದೇಶಕ್ಕೂ ಅವರು ಹೋಗಲಿದ್ದಾರೆ. ಪಾಂಗಾಂಗ್ ಸರೋವರದ ಬಳಿಯಲ್ಲಿನ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದ್ದಾರೆ. ಗಡಿಯಲ್ಲಿ ಯಥಾಸ್ಥಿತಿ ಉಲ್ಲಂಘಿಸುವ ಚೀನಾದ ಹೊಸ ಪ್ರಯತ್ನವನ್ನು ಹಿಮ್ಮೆಟ್ಟಿಸಿದ ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಚೀನಾ ಸೇನೆ 80 ಕಿ.ಮೀ. ದೂರದಲ್ಲಿದೆ'

ಶ್ರೀನಗರ: ಚೀನಾದ ಸೇನೆಯು ಲೇಹ್‌ದಿಂದ ಕೇವಲ 80 ಕಿ.ಮೀ ದೂರದಲ್ಲಿದೆ ಎಂದು ಲಡಾಖ್‌ನ ಮಾಜಿ ಶಾಸಕರೊಬ್ಬರು ಬುಧವಾರ ಹೇಳಿದ್ದಾರೆ.

ಭಾರತ ಮತ್ತು ಚೀನಾ ಸೇನೆಯ ಸಂಘರ್ಷದಿಂದ ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಸೃಷ್ಟಿಯಾಗಿರುವ ವಾಸ್ತವ ಸ್ಥಿತಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ ತಿಳಿಸಬೇಕು. ಸತ್ಯ ಸಂಗತಿಯನ್ನು ಜನರಿಂದ ಮುಚ್ಚಿಡಬಾರದು ಎಂದು ಲಡಾಖ್‌ನ ನುಬ್ರಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡೆಲ್ಡಾನ್‌ ನಮ್‌ಗ್ಯಾಲ್‌ ಒತ್ತಾಯಿಸಿದ್ದಾರೆ. 

ಚೀನಾ ಸೇನೆಯು ಈಗಾಗಲೇ ಗಡಿಯನ್ನು ದಾಟಿ ಬಂದು ಭಾರತದ ಭೂ ಪ್ರದೇಶ ಅತಿಕ್ರಮಿಸಿಕೊಂಡಿದ್ದು, ಲೆಹ್‌ದಿಂದ ಕೇವಲ 80 ಕಿ.ಮೀ ದೂರದಲ್ಲಿದೆ. ಚಳಿಗಾಲಕ್ಕೂ ಮೊದಲೇ ಭಾರತ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ ಅಪಾಯ ಎದುರಾಗಬಹುದು ಎಂದು ಸ್ಥಳೀಯ ಸುದ್ದಿಸಂಸ್ಥೆ ಕೆಎನ್‌ಒ ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು