ಸೋಮವಾರ, ಜನವರಿ 24, 2022
21 °C
ನಾಗಾಲ್ಯಾಂಡ್ ನಾಗರಿಕರ ಹತ್ಯೆ ಕುರಿತು ಪೊಲೀಸರ ತನಿಖಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ

ನಾಗಾಲ್ಯಾಂಡ್: ‘ಗುರುತು ಖಚಿತಕ್ಕೆ ಯತ್ನವೇ ಮಾಡದ ಸೈನಿಕರು’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಹಿಮಾ (ಪಿಟಿಐ): ‘ಟಿರು–ಒಟಿಂಗ್‌ ಕಾರ್ಯಾಚರಣೆ ವೇಳೆ ನಾಗರಿಕರ ಗುರುತನ್ನು ಖಚಿತಪಡಿಸಿಕೊ
ಳ್ಳಲು ಸೈನಿಕರು ಯತ್ನವನ್ನೇ ಮಾಡಿಲ್ಲ. ಜತೆಗೆ ತಾವು ನಡೆಸಿದ ಹತ್ಯೆಗಳನ್ನು ಮರೆಮಾಚಲು ನಾಗರಿಕರ ಶವಗಳನ್ನು ಬಚ್ಚಿಡಲು ಯತ್ನಿಸಿದ್ದರು’ ಎಂದು ನಾಗಾಲ್ಯಾಂಡ್‌ ಪೊಲೀಸರು ತಮ್ಮ ತನಿಖಾ ವರದಿಯಲ್ಲಿ ಆರೋಪಿಸಿದ್ದಾರೆ.

ಟಿರು ಮತ್ತು ಒಟಿಂಗ್‌ನಲ್ಲಿ ಸೈನಿಕರು ಶನಿವಾರ ಮತ್ತು ಭಾನುವಾರ ಗುಂಡು ಹಾರಿಸಿ 14 ನಾಗರಿಕರ ಹತ್ಯೆ ಮಾಡಿದ ಪ್ರಕರಣದ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಟಿ.ಜಾನ್‌ ಲೋಂಗ್‌ಕುಮೆರ್‌ ಮತ್ತು ಪೊಲೀಸ್ ಆಯುಕ್ತ ರೋವಿಲಾಟು ಮೊರ್ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಂಟಿ ತನಿಖಾ ವರದಿಯಲ್ಲಿ ಈ ಮಾಹಿತಿ ಇದೆ.

‘ಡಿಸೆಂಬರ್ 4ರ ಸಂಜೆ 4.10ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಲ್ಲಿದ್ದಲು ಗಣಿಯಿಂದ ಮಹೀಂದ್ರಾ ಪಿಕ್‌ಅಪ್ ವಾಹನದಲ್ಲಿ ಬರುತ್ತಿದ್ದ ನಾಗರಿಕರನ್ನು ತಪಾಸಣೆಗೆ ಒಳಪಡಿಸದೇ ಮತ್ತು ಅವರ ಗುರುತನ್ನು ಖಚಿತಪಡಿಸಿಕೊಳ್ಳದೇ ಸೈನಿಕರು ಏಕಾಏಕಿ ಗುಂಡು ಹಾರಿಸಿದ್ದಾರೆ. ಮೃತಪಟ್ಟ ನಾಗರಿಕರೆಲ್ಲರೂ ನಿರಾಯುಧರಾಗಿದ್ದರು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಒಟಿಂಗ್ ಗ್ರಾಮದ ಸಮೀಪವೇ ಘಟನೆ ನಡೆದಿದೆ. ಗುಂಡಿನ ಶಬ್ದ ಕೇಳಿಸಿಕೊಂಡ ಗ್ರಾಮಸ್ಥರು ಘಟನಾ ಸ್ಥಳದತ್ತ ತೆರಳಿದ್ದಾರೆ. ಮೊದಲು ಅವರು ತಮ್ಮ ಗ್ರಾಮದ ಮಹೀಂದ್ರಾ ಪಿಕ್‌ಅಪ್ ಟ್ರಕ್‌ ಅನ್ನು ನೋಡಿದ್ದಾರೆ. ಸಮೀಪವೇ ಬೇರೊಂದು ಟಾಟಾ ಮೊಬೈಲ್ ಪಿಕ್‌ಅಪ್‌ ವಾಹನದಲ್ಲಿ ಸೈನಿಕರು, ಶವಗಳನ್ನು ಮುಚ್ಚಿಡುತ್ತಿರುವುದನ್ನು ಗಮನಿಸಿದ್ದಾರೆ. ತಮ್ಮ ಗುಂಡಿಗೆ ಬಲಿಯಾದವರ ಶವಗಳನ್ನು ಸೇನಾ ಶಿಬಿರಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿಯೇ, ಶವಗಳನ್ನು ಟಾರ್ಪಲ್‌ನಲ್ಲಿ ಮುಚ್ಚಿ ಬೇರೊಂದು ವಾಹನಕ್ಕೆ ತುಂಬಿಸಿದ್ದಾರೆ’ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

‘ಇದನ್ನು ಕಂಡು ಆಕ್ರೋಶಗೊಂಡ ಗ್ರಾಮಸ್ಥರು ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಸೇನೆಯ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಆಗ ಸೈನಿಕರು, ನಾಗರಿಕರ ಮೇಲೆ ಮತ್ತೆ ಗುಂಡು ಹಾರಿಸಿದ್ದಾರೆ. ಸೈನಿಕರು ಎರಡನೇ ಬಾರಿ ಗುಂಡು ಹಾರಿಸಿದಾಗ ಏಳು ನಾಗರಿಕರು ಮೃತಪಟ್ಟಿ
ದ್ದಾರೆ. 14 ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 8 ನಾಗರಿಕರಿಗೆ ಸಾಧಾರಣ ಗಾಯಗಳಾಗಿವೆ. ಸೈನಿಕರು ಗುಂಡು ಹಾರಿಸುತ್ತಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಪರಾರಿಯಾಗುವ ದಾರಿ
ಯಲ್ಲಿ ಇದ್ದ ಕಲ್ಲಿದ್ದಲು ಗಣಿ ಕಾರ್ಮಿಕರ ಗುಡಿಸಲುಗಳ ಮೇಲೂ ಗುಂಡು ಹಾರಿಸಿದ್ದಾರೆ. ನಂತರ ಸೈನಿಕರು ರಾಜ್ಯದ ಗಡಿದಾಟಿ ಅಸ್ಸಾಂ ಪ್ರವೇಶಿಸಿದ್ದಾರೆ. ಇದನ್ನು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಮೃತರ ಶವಗಳನ್ನು ಭಾನುವಾರ ಬೆಳಿಗ್ಗೆ ಕುಟುಂದವರಿಗೆ ಹಸ್ತಾಂತರಿಸಲು ಯೋಜಿಸಲಾಗಿತ್ತು. ಆದರೆ ಅದನ್ನು ಮುಂದೂಡಲಾಯಿತು. ಇದರಿಂದ ಆಕ್ರೋಶಗೊಂಡ ನಾಗರಿಕರು ಸಮೀ
ಪದಲ್ಲೇ ಇದ್ದ ‘27 ಅಸ್ಸಾಂ ರೈಫಲ್ಸ್‌’ನ ಶಿಬಿರದತ್ತ ನುಗ್ಗಿದ್ದರು. ಶಿಬಿರದ ಕಟ್ಟಡಗಳಿಗೆ ಬೆಂಕಿ ಇಟ್ಟರು. ಆಗ ಸೈನಿಕರು ಮತ್ತೆ ಗುಂಡು ಹಾರಿಸಿದರು. ಆ ಘಟನೆಯಲ್ಲಿ ಮತ್ತೊಬ್ಬ ನಾಗರಿಕ ಸೈನಿಕರ ಗುಂಡಿಗೆ ಬಲಿಯಾದರು. ಆರು ನಾಗರಿಕರಿಗೆ ಗುಂಡೇಟಿನ ಗಾಯಗಳಾಗಿವೆ. ಘರ್ಷಣೆಯಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತನಿಖೆಗೆ ಮೇಜರ್‌ ಜನರಲ್ ರ‍್ಯಾಂಕ್‌ನ ಅಧಿಕಾರಿ: ಈ ಅವಘಡ ಕುರಿತು ಆಂತರಿಕ ತನಿಖೆ ನಡೆಸಲು ಸೇನೆ ಭಾನುವಾರವೇ ಆದೇಶಿಸಿದೆ. ತನಿಖೆಯು ಮೇಜರ್‌ ಜನರಲ್ ರ‍್ಯಾಂಕ್‌ನ ಅಧಿಕಾರಿಯ ನೇತೃತ್ವದಲ್ಲಿ ನಡೆಯಲಿದೆ ಎಂದು ಸೇನೆಯ ಮೂಲಗಳು ಮಂಗಳವಾರ
ಹೇಳಿದೆ. 

 

‘ಏಳು ದಿನ ಗಸ್ತು ತಿರುಗಬೇಡಿ’

ಮೊನ್‌ ಜಿಲ್ಲೆಯಲ್ಲಿ ಏಳು ದಿನಗಳ ಶೋಕಾಚರಣೆಗೆ ಕೊನ್ಯಾಕ್‌ ಸಂಘಟನೆ ಕರೆ ನೀಡಿದೆ. ಸೈನಿಕರ ಗುಂಡಿಗೆ ಬಲಿಯಾದ ನಾಗರಿಕರು ಕೊನ್ಯಾಕ್‌ ಬುಡಕಟ್ಟಿಗೆ ಸೇರಿದವರಾಗಿದ್ದಾರೆ.

ಸಂಘಟನೆಯು ಮಂಗಳವಾರ ರಾಜ್ಯ ಬಂದ್‌ಗೆ ಕರೆ ನೀಡಿತ್ತು. ಬಂದ್‌ ಅನ್ನು ಶಾಂತಿಯುತವಾಗಿ ಆಚರಿಸಲಾಯಿತು. ಬುಧವಾರದಿಂದ ಏಳು ದಿನ ಶೋಕಾಚರಣೆಗೆ ಕರೆ ನೀಡಿದೆ. ‘ಶೋಕಾಚರಣೆಯ ಏಳೂ ದಿನಗಳಲ್ಲಿ ಕೊನ್ಯಾಕ್‌ ಪ್ರದೇಶದಲ್ಲಿ ಸೈನಿಕರು ಗಸ್ತು ನಡೆಸಬಾರದು. ಒಂದು ವೇಳೆ ಗಸ್ತು ನಡೆಸಲು ಮುಂದಾಗಿ, ಯಾವುದೇ ಅಹಿತಕರ ಘಟನೆಗಳು ನಡೆದರೆ ಸೈನಿಕರೇ ಅದಕ್ಕೆ ಹೊಣೆ’ ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.

ರಾಷ್ಟ್ರಪತಿಗೆ ಪತ್ರ: ‘ಸೈನಿಕರು ನಡೆಸಿದ ಹತ್ಯಾಕಾಂಡದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆಮಾಡಿ. ಈ ಕೃತ್ಯದಲ್ಲಿ ಭಾಗಿಯಾದ ಸೈನಿಕರನ್ನು ಗುರುತಿಸಿ ಮತ್ತು ಅವರ ವಿರುದ್ಧ ತೆಗೆದುಕೊಂಡ ಕ್ರಮವನ್ನು ಬಹಿರಂಗಪಡಿಸಿ’ ಎಂದು ಒತ್ತಾಯಿಸಿ ಕೊನ್ಯಾಕ್‌ ಸಂಘಟನೆಯು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ ಬರೆದಿದೆ.

‘ಆಫ್‌ಸ್ಪ ಕಾಯ್ದೆಯನ್ನು ತಕ್ಷಣವೇ ರದ್ದುಮಾಡಿ. ನಾಗಾಲ್ಯಾಂಡ್‌ನಿಂದ ಸೇನೆಯ ಅಸ್ಸಾಂ ರೈಫಲ್ಸ್‌ ಬೆಟಾಲಿಯನ್‌ ಅನ್ನು ವಾಪಸ್‌ ಕರೆಸಿಕೊಳ್ಳಿ’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

 

l ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958 ಅನ್ನು ರದ್ದುಪಡಿಸಿ ಎಂದು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಾಗಾಲ್ಯಾಂಡ್‌ ಸರ್ಕಾರವು ಸಂಪುಟ ಸಭೆಯಲ್ಲಿ ನಿರ್ಧರಿಸಿದೆ 

l ಡಿಸೆಂಬರ್ 10ರವರೆಗೆ ನಡೆಯಬೇಕಿದ್ದ ಹಾರ್ನ್‌ಬಿಲ್ ಉತ್ಸವವನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರವು ಆದೇಶಿಸಿದೆ. ಉತ್ಸವದಲ್ಲಿ ಭಾಗಿಯಾಗಬೇಕಿದ್ದ ವಿವಿಧ ಬುಡಕಟ್ಟು ಸಮುದಾಯಗಳು ಈ ಮೊದಲೇ ಉತ್ಸವವನ್ನು ಬಹಿಷ್ಕರಿಸಿದ್ದವು

l ಸೈನಿಕರ ಗುಂಡಿಗೆ ಬಲಿಯಾಗಿದ್ದ ನಾಗರಿಕರ ಅಂತ್ಯಸಂಸ್ಕಾರವು ಸೋಮವಾರ ತಡರಾತ್ರಿ ನಡೆದಿದೆ. ಶವಸಂಸ್ಕಾರದ ವೇಳೆ ಮೃತರ ಕುಟುಂಬದ ಸದಸ್ಯರ ಆಕ್ರಂದನದ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

l ‘ಈ ಅವಘಡದ ಬಗ್ಗೆ ಆರು ವಾರಗಳ ಒಳಗೆ ವಿಸ್ತೃತ ವರದಿ ನೀಡಿ’ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಮತ್ತು ನಾಗಾಲ್ಯಾಂಡ್‌ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು