ಗುರುವಾರ , ಡಿಸೆಂಬರ್ 1, 2022
20 °C

ಜೆಇಇ ಮೇನ್ಸ್‌ ಅಕ್ರಮ: 820 ಜನರ ವಂಚನೆಗೆ ಸಹಾಯ ಮಾಡಿದ ರಷ್ಯಾ ಹ್ಯಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜೆಇಇ ಮೇನ್ಸ್‌ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ರಷ್ಯಾದ ಹ್ಯಾಕರ್ ಮಿಕೇಲ್‌ ಶಾರ್ಗಿನ್‌ 820 ಜನರಿಗೆ ವಂಚನೆ ಮಾಡಲು ಸಹಾಯ ಮಾಡಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಈ ಮಾಹಿತಿ ಗೊತ್ತಾಗಿದೆ. ಈ ಸಂಖ್ಯೆ ಇನ್ನು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

25 ವರ್ಷದ ಹ್ಯಾಕರ್‌ ಮಿಕೇಲ್‌ ಶಾರ್ಗಿನ್‌ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಆರೋಪಿಯನ್ನು 2 ದಿನಗಳವರೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ವಶಕ್ಕೆ ನೀಡಿದೆ.

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿನ್ನೆ ಭಾರತಕ್ಕೆ ಬಂದಿಳಿದ ಮಿಕೇಲ್‌ ಶಾರ್ಗಿನ್‌ನನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.

ಈ ವ್ಯಕ್ತಿಯ ಕುರಿತು ಸಿಬಿಐ ಲುಕ್‌ ಔಟ್‌ ನೋಟಿಸ್‌ ಹೊರಡಿಸಿತ್ತು. ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಈತನೇ ಮುಖ್ಯ ಹ್ಯಾಕರ್‌ ಆಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಜೆಇಇ ಪರೀಕ್ಷೆಯನ್ನು 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಈ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಗೊತ್ತುಪಡಿಸಿದ ಕೇಂದ್ರಗಳಲ್ಲಿ ನಿಯಂತ್ರಣ-ನಿರ್ಬಂಧಿತ ಕಂಪ್ಯೂಟರ್‌ಗಳಲ್ಲಿ ಮಾತ್ರ ನಡೆಸಲಾಗುತ್ತದೆ.

ಹ್ಯಾಕರ್‌ ಮಿಕೇಲ್‌ ಶಾರ್ಗಿನ್‌ ಸಿಸ್ಟಂಗಳನ್ನು ಹ್ಯಾಕ್‌ ಮಾಡಿ, ಬೇರೆ ಪ್ರದೇಶದಲ್ಲಿ ಇರುವವರಿಗೆ ಜೆಇಇ ಪ್ರಶ್ನೆಪತ್ರಿಕೆ ಕಾಣುವಂತೆ ಮಾಡಿದ್ದನು. ಅವರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು