ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಿನಲ್ಲಿ ಡ್ರಗ್ಸ್‌ ಪ್ರಕರಣ: ಆರ್ಯನ್‌ ಇಂದು ಬಿಡುಗಡೆ ಸಾಧ್ಯತೆ

ಹಡಗಿನಲ್ಲಿ ಡ್ರಗ್ಸ್‌ ಪ್ರಕರಣ: ಜಾಮೀನು ದೊರೆತರೂ ಸಕಾಲದಲ್ಲಿ ಜೈಲು ತಲುಪದ ಆದೇಶ
Last Updated 29 ಅಕ್ಟೋಬರ್ 2021, 21:10 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸೂಪರ್ ಸ್ಟಾರ್‌ ಶಾರುಕ್‌ ಖಾನ್‌ ಮಗ, ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪ್ರಕರಣದ ಆರೋಪಿ ಆರ್ಯನ್‌ ಖಾನ್‌ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದ್ದರೂ ಅವರ ಬಿಡುಗಡೆ ಶುಕ್ರವಾರ ಸಾಧ್ಯವಾಗಿಲ್ಲ. ಶನಿವಾರ ಬಿಡುಗಡೆ ಆಗಬಹುದು ಎನ್ನಲಾಗಿದೆ.

ಜಾಮೀನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಸಮಯ ಹಿಡಿಯಿತು. ನಿಗದಿತ ಸಮಯ ಸಂಜೆ 5.30ರ ಒಳಗೆ ಬಿಡುಗಡೆ ಆದೇಶವನ್ನು ಜೈಲಿಗೆ ತಲುಪಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಆರ್ಯನ್‌ ಅವರು ಶುಕ್ರವಾರ ರಾತ್ರಿಯೂ ಆರ್ಥರ್‌ ರೋಡ್ ಜೈಲಿನಲ್ಲಿ ಕಳೆಯುವುದು ಅನಿವಾರ್ಯವಾಗಿದೆ.

ಶಾರುಕ್‌ ಖಾನ್‌ ಮತ್ತು ಆರ್ಯನ್‌ ತಾಯಿ ಗೌರಿ ಅವರು ಮಗನನ್ನು ಮನೆಗೆ ಕರೆದೊಯ್ಯುವುದಕ್ಕಾಗಿ ಆರ್ಥರ್‌ ರೋಡ್‌ ಜೈಲಿನ ಸಮೀಪಕ್ಕೆ ಹೋಗಿ
ದ್ದರು. ಆದರೆ, ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದ ಬಳಿಕ ಹಿಂದಿರುಗಿದರು.

ಶಾರುಕ್‌ ಕುಟುಂಬದ ಸ್ನೇಹಿತೆ ಮತ್ತು ನಟಿ ಜೂಹಿ ಚಾವ್ಲಾ ಅವರು ಆರ್ಯನ್‌ ಜಾಮೀನಿಗೆ ಭದ್ರತೆ ಒದಗಿಸಿದ್ದಾರೆ. ‘ಆರ್ಯನ್‌ಗೆ ಜಾಮೀನು ದೊರೆತಿರುವುದು ಖುಷಿ ಕೊಟ್ಟಿದೆ. ಆತ ಆದಷ್ಟು ಬೇಗನೆ ಮನೆಗೆ ಮರಳಲಿ’ ಎಂದು ಜೂಹಿ ಹೇಳಿದ್ದಾರೆ.

ನ್ಯಾಯಮೂರ್ತಿ ನಿತಿನ್‌ ಸಾಂಬ್ರೆ ಅವರು ಜಾಮೀನು ಆದೇಶವನ್ನು ಅಂತಿಮಗೊಳಿಸಿದ ಬಳಿಕ, ಆರ್ಯನ್‌ ವಕೀಲ ಸತೀಶ್‌ ಮನಶಿಂದೆ ಅವರು ಅದನ್ನು ಕೋರ್ಟ್‌ನಿಂದ ಪಡೆದುಕೊಂಡರು.

ನಂತರ, ಜಾಮೀನು ಆದೇಶವನ್ನು ವಿಶೇಷ ಎನ್‌ಡಿಪಿಎಸ್‌ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.‘ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡವು. ಆರ್ಯನ್‌ನನ್ನು ಬಾಲ್ಯದಿಂದಲೇ ಗೊತ್ತಿರುವ ಜೂಹಿ ಅವರ ಜಾಮೀನು ಭದ್ರತೆಯನ್ನು ಕೋರ್ಟ್‌ ಒಪ್ಪಿಕೊಂಡಿತು’ ಎಂದು ಮನಶಿಂದೆ ಹೇಳಿದ್ದಾರೆ.

ಸೆಷನ್ಸ್‌ ನ್ಯಾಯಾಲಯದಿಂದ ಬಿಡುಗಡೆ ಆದೇಶ ಸಿಕ್ಕರೂ ಸಂಚಾರ ದಟ್ಟಣೆಯಿಂದಾಗಿ ಆದೇಶವನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿ ಜೈಲಿಗೆ ತಲುಪಿಸಲು ಸಾಧ್ಯವಾಗಲಿಲ್ಲ.

₹1 ಲಕ್ಷದ ವೈಯಕ್ತಿಕ ಭದ್ರತೆ, ಪಾಸ್‌ಪೋರ್ಟ್‌ ನ್ಯಾಯಾಲಯಕ್ಕೆ ಸಲ್ಲಿಕೆ, ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ ಕಚೇರಿಗೆ ಪ್ರತಿ ಶುಕ್ರವಾರ ಹಾಜರಾಗಬೇಕು ಮುಂತಾದ ಷರತ್ತುಗಳನ್ನು ಹಾಕಲಾಗಿದೆ.
--

‘ಫ್ಯಾಷನ್ ಟಿ.ವಿ. ಮುಖ್ಯಸ್ಥನನ್ನು ಬಂಧಿಸಿ’

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆಗೆ ಸಂಬಂಧಿಸಿದಂತೆ ಮಾದಕದ್ರವ್ಯ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ದಾಳಿ ನಡೆಸಿದ ವೇಳೆ ಅಲ್ಲಿ ಹಾಜರಿದ್ದ ಗಡ್ಡಧಾರಿ ವ್ಯಕ್ತಿಯನ್ನು ಫ್ಯಾಷನ್‌ ಟೀವಿ ಇಂಡಿಯಾದ ಮುಖ್ಯಸ್ಥ ಕಾಶಿಫ್‌ ಖಾನ್‌ ಎಂದು ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಗುರುತಿಸಿದ್ದಾರೆ. ಅವರೇ ಆ ಪಾರ್ಟಿಯ ಮುಖ್ಯ ಆಯೋಜಕರು. ಅವರನ್ನು ಕೂಡಲೇ ಬಂಧಿಸಿ ಎಂದು ಮಲಿಕ್‌ ಆಗ್ರಹಿಸಿದ್ದಾರೆ.

‘ಹಡಗಿನಲ್ಲಿ ಹುಡುಗಿಯೊಬ್ಬಳ ಜೊತೆ ನೃತ್ಯ ಮಾಡುತ್ತಿದ್ದ ವ್ಯಕ್ತಿ ಕಾಶಿಫ್‌ ಖಾನ್‌, ಆತ ಡ್ರಗ್ಸ್‌ ದಂಧೆ, ವಯಸ್ಕರ ಚಿತ್ರಗಳ ದಂಧೆಗಳನ್ನು ನಡೆಸುತ್ತಾನೆ. ಆತ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರ ಆಪ್ತ ಸ್ನೇಹಿತ’ ಎಂದು ಆರೋಪ ಮಾಡಿದ್ದಾರೆ.

‘ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಲು ಸುಮಾರು ಒಂದು ತಿಂಗಳಿಂದ ಎನ್‌ಸಿಬಿ ಯೋಜನೆ ರೂಪಿಸುತ್ತಿತ್ತು ಎಂದು ನಮಗೆ ತಿಳಿದಿದೆ. ಈ ಪಾರ್ಟಿಯನ್ನು ಯಾರು ಆಯೋಜಿಸಿದ್ದರು ಎಂದು ಈ ಒಂದು ತಿಂಗಳ ಯೋಜನೆ ಮತ್ತು ತನಿಖೆಯಲ್ಲಿ ಎನ್‌ಸಿಬಿಗೆ ಗೊತ್ತಾಗಲಿಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಸಮೀರ್‌ ವಾಂಖೆಡೆ, ‘ಇದು ಸುಳ್ಳು, ಕಾನೂನು ಎಲ್ಲವನ್ನೂ ನೋಡಿಕೊಳ್ಳುತ್ತದೆ’ ಎಂದಿದ್ದಾರೆ.

ಆರೋಪ ಅಲ್ಲಗಳೆದ ಕಾಶಿಫ್‌: ಈ ಆರೋಪಗಳನ್ನು ಕಾಶಿಫ್‌ ಖಾನ್‌ ತಳ್ಳಿಹಾಕಿದ್ದಾರೆ. ‘ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಪರಿಚಯ ನನಗೆ ಇಲ್ಲ. ಅವರನ್ನು ನಾನು ಭೇಟಿಯೂ ಆಗಿಲ್ಲ. ಅವತ್ತು ದಾಳಿ ನಡೆದಾಗ ನನಗೆ ಅದರ ಬಗ್ಗೆ ಸುಳಿವಿರಲಿಲ್ಲ. ಬೇರೆ ಎಲ್ಲರಂತೆ ನನ್ನನ್ನೂ ಪರಿಶೀಲನೆಗೆ ಒಳಪಡಿಸಲಾಯಿತು. ನವಾಬ್‌ ಮಲಿಕ್‌ ಅವರು ಗೊಂದಲಕ್ಕೆ ಒಳಗಾಗಿರಬಹುದು. ನನ್ನ ವಿರುದ್ಧ ಕಳ್ಳ ವ್ಯವಹಾರಗಳ ಆರೋಪಗಳು ಸಾಬೀತಾದರೆ ನಾನು ಅವರ ಕಾಲಿಗೆ ಬೀಳುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT