ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ವಿಧಿ ವಿಧಾನಗಳೊಂದಿಗೆ ಘೇಂಡಾಮೃಗಗಳ ಕೊಂಬು ದಹಿಸಿದ ಅಸ್ಸಾಂ ಸರ್ಕಾರ!

Last Updated 22 ಸೆಪ್ಟೆಂಬರ್ 2021, 9:49 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂ ಸರ್ಕಾರ ತನ್ನಲ್ಲಿ ಸಂರಕ್ಷಿಸಿದ್ದ ಘೇಂಡಾಮೃಗಗಳ 2479 ಕೊಂಬುಗಳನ್ನುಪೂರ್ವ ನಿರ್ಧಾರದಂತೆ ಪೂಜಾ ವಿಧಿ ವಿಧಾನಗಳೊಂದಿಗೆ ಬುಧವಾರ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಸುಟ್ಟು ಹಾಕಿದೆ.

ಟ್ವಿಟರ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು, ‘ಇದೊಂದು ಐತಿಹಾಸಿಕ ದಿನ. ಘೇಂಡಾಮೃಗಗಳು ಕೇವಲ ಪ್ರಾಣಿಯಲ್ಲ. ಅವು ನಮ್ಮ ಅಸ್ಮಿತೆ. ಅವುಗಳ ಕೊಂಬಿನಲ್ಲಿ ಭಾರಿ ಔಷಧಿ ಗುಣ ಇದೆ ಎಂದು ತಪ್ಪು ತಿಳಿದು ಅವುಗಳನ್ನು ಕೊಲ್ಲಲಾಗುತ್ತಿತ್ತು. ಹೀಗಾಗಿ ಸಂರಕ್ಷಿಸಲಾಗಿದ್ದ 2479 ಕೊಂಬುಗಳನ್ನು ಪ್ರಧಾನಿ ಮೋದಿ ಸಲಹೆ ಮೇಲೆ ಸಚಿವ ಸಂಪುಟದ ನಿರ್ಣಯದಂತೆ ಸುಟ್ಟು ಹಾಕಲಾಗಿದೆ. ಇದು ಪ್ರಾಣಿಗಳ ಸಂರಕ್ಷಿಸುವ ನಿಟ್ಟಿನಲ್ಲಿ ಜಗತ್ತಿನಲ್ಲಿ ಕ್ರಾಂತಿಕಾರಕ ನಡೆ‘ ಎಂದು ಅವರು ಹೇಳಿದ್ದಾರೆ.

94 ಕೊಂಬುಗಳನ್ನು ಅಧ್ಯಯನ ಹಾಗೂ ಪಾರಂಪರಿಕ ದೃಷ್ಟಿಯಿಂದ ಸಂರಕ್ಷಿಸಿಡಲಾಗಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ. ಇಂದು ವಿಶ್ವ ಘೇಂಡಾಮೃಗಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ರಾಜ್ಯದ ಸಂಗ್ರಹಾಗಾರಗಳಲ್ಲಿರುವ, ಘೇಂಡಾಮೃಗಗಳ 2,479 ಕೊಂಬುಗಳನ್ನು ಸುಡಬೇಕು ಎಂಬ ಪ್ರಸ್ತಾವನೆಗೆ ಅಸ್ಸಾಂ ಸಚಿವ ಸಂಪುಟ ಕಳೆದ ಗುರುವಾರ ಅನುಮೋದನೆ ನೀಡಿತ್ತು.

ಘೇಂಡಾಮೃಗದ ಕೊಂಬಿನಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಕೊಂಬುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಹ ಭಾರಿ ಬೇಡಿಕೆ. ಈ ಕಾರಣಕ್ಕೆ ಈ ಪ್ರಾಣಿಗಳ ಕಳ್ಳಬೇಟೆಅಸ್ಸಾಂನಲ್ಲಿ ಅಧಿಕ.

‘ಘೇಂಡಾಮೃಗಗಳ ಹತ್ಯೆ ಮತ್ತು ಕೊಂಬುಗಳ ಕಳ್ಳಸಾಗಣೆಗೆ ಕಡಿವಾಣ ಹಾಕುವ ಸಲುವಾಗಿ ಸರ್ಕಾರದ ಸಂಗ್ರಹದಲ್ಲಿರುವ ಕೊಂಬುಗಳನ್ನು ಸುಡಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು.

‘ಒಟ್ಟು 2,623 ಕೊಂಬುಗಳ ದಾಸ್ತಾನಿದೆ. ಈ ಕೊಂಬುಗಳ ಬಳಕೆ ಬಗ್ಗೆ ಜನರಲ್ಲಿ ಮನೆ ಮಾಡಿರುವ ಮೌಢ್ಯವನ್ನು ಹೋಗಲಾಡಿಸುವ ಉದ್ದೇಶದಿಂದ 2,479 ಕೊಂಬುಗಳನ್ನು ಸಾರ್ವಜನಿಕವಾಗಿಯೇ ಸುಡಲಾಗುವುದು. ಉಳಿದ 94 ಕೊಂಬುಗಳನ್ನು ಅಧ್ಯಯನ ಹಾಗೂ ಪಾರಂಪರಿಕ ದೃಷ್ಟಿಯಿಂದ ಸಂರಕ್ಷಿಸಿಡಲಾಗುವುದು. ಇನ್ನುಳಿದ 50 ಕೊಂಬುಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗಾಗಿ ಉಳಿಸಿಕೊಳ್ಳಲಾಗುವುದು’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT