ಸೋಮವಾರ, ಜನವರಿ 17, 2022
27 °C
ಆರ್‌ಎಲ್‌ಡಿಯಿಂದ ವಿದ್ಯಾವಂತರು, ಎಸ್‌ಪಿಯಿಂದ ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳ ಆಯ್ಕೆ

ವಿಧಾನಸಭೆ ಚುನಾವಣೆ: ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮಿತ್ರ ಪಕ್ಷಗಳ ಭಿನ್ನ ಮಾನದಂಡ

ಪಿಟಿಐ Updated:

ಅಕ್ಷರ ಗಾತ್ರ : | |

ನೊಯ್ಡಾ: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಬಿಡುಗಡೆ ಮಾಡಿವೆ. ಅಭ್ಯರ್ಥಿಗಳ ಆಯ್ಕೆಗೆ ಎರಡು ಪಕ್ಷಗಳು ಭಿನ್ನ ಮಾನದಂಡ ಅನುಸರಿಸಿವೆ.

‘ಅಭ್ಯರ್ಥಿಗಳ ಹಿನ್ನೆಲೆಯನ್ನು ಮಾನದಂಡವಾಗಿ ಇರಿಸಿಕೊಂಡು ಟಿಕೆಟ್‌ ಹಂಚಲಾಗಿದೆ. ಆರ್‌ಎಲ್‌ಡಿ ಘೋಷಿಸಿರುವ ಅಭ್ಯರ್ಥಿಗಳಲ್ಲಿ ಯಾರಿಗೂ ಅಪರಾಧ ಹಿನ್ನೆಲೆ ಇಲ್ಲ. ಅವರೆಲ್ಲರೂ ವಿದ್ಯಾವಂತರು. ನಮ್ಮ ಅಭ್ಯರ್ಥಿಗಳಲ್ಲಿ ಯಾರೂ ಹೊರಗಿನಿಂದ ಬಂದವರಿಲ್ಲ. ಎಲ್ಲರೂ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ನಿವಾಸಿಗಳೇ ಆಗಿದ್ದಾರೆ’ ಎಂದು ಆರ್‌ಎಲ್‌ಡಿ ವಕ್ತಾರ ಸಂದೀಪ್‌ ಚೌಧರಿ ಹೇಳಿದ್ದಾರೆ.

‘ಇತ್ತೀಚಿನ ತಿಂಗಳುಗಳಲ್ಲಿ ಪಕ್ಷದ ನಾಯಕರು ಸಮಾವೇಶಗಳನ್ನು ಮತ್ತು ಪಂಚಾಯತಿಗಳನ್ನು ನಡೆಸಿದ್ದಾರೆ. ಆ ಸಂದರ್ಭಗಳಲ್ಲಿ ಜನರಿಂದ ದೊರಕಿರುವ ಸಲಹೆಗಳ ಆಧಾರದ ಮೇಲೂ ಅಭ್ಯರ್ಥಿಗಳ ಕುರಿತು  ಪಕ್ಷ ನಿರ್ಧಾರ ತೆಗೆದುಕೊಂಡಿದೆ. ರೈತರು ಬಿಜೆಪಿ ಕುರಿತು ಖುಷಿಯಾಗಿಲ್ಲ. ಮುಸ್ಲಿಂ ಸಮುದಾಯ ಕೂಡಾ ಬಿಜೆಪಿ ಕುರಿತು ಖುಷಿ ಆಗಿಲ್ಲ. ಕಳೆದ ಬಾರಿ ಬಿಜೆಪಿಯು ಹುಸಿ ಕನಸುಗಳು ಮತ್ತು ಭರವಸೆಯನ್ನು ಬಿತ್ತಿತ್ತು ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಗೆಲ್ಲುವ ಸಾಮರ್ಥ್ಯವೇ ಮಾನದಂಡ: ‘ಎಸ್‌ಪಿ ಮತ್ತು ಆರ್‌ಎಲ್‌ಡಿ ನಡುವಣ ಮೈತ್ರಿಯು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಖಚಿತವಾಗಿ ಪ್ರಭಾವ ಬೀರಲಿದೆ. ಈ ಭಾಗದಲ್ಲಿ ಬಿಜೆಪಿಗೆ ಪ್ರತಿಕೂಲ ವಾತಾವರಣ ಇದೆ. ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ ಹಂಚುವ ವಿಚಾರದಲ್ಲಿ ಮೈತ್ರಿಕೂಟ ಹೊಂದಿದ್ದ ಮೊದಲ ಮಾನದಂಡವಾಗಿತ್ತು’ ಎಂದು ಎಸ್‌ಪಿ ವಕ್ತಾರ ಅಬ್ಬಾಸ್‌ ಹೈದರ್‌ ತಿಳಿಸಿದರು. 

2017ರ ಚುನಾವಣೆಯಲ್ಲಿ ಕೈರಾನಾ ಕ್ಷೇತ್ರದಿಂದ ನಾಹಿದ್‌ ಹಸನ್‌ ಮತ್ತು ಮೀರಠ್‌ ಕ್ಷೇತ್ರದಿಂದ ರಫೀಕ್‌ ಅನ್ಸಾರಿ ಅವರು ಎಸ್‌ಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿಯೂ ಆ ಕ್ಷೇತ್ರಗಳಲ್ಲಿ ಅವರನ್ನೇ ಕಣಕ್ಕಿಳಿಸಲಾಗಿದೆ. ಘೋಷಣೆ ಮಾಡಲಾಗಿರುವ 29 ಅಭ್ಯರ್ಥಿಗಳಲ್ಲಿ ಆರ್‌ಎಲ್‌ಡಿಯ ಬಬಿತಾ ದೇವಿ ಏಕೈಕ ಮಹಿಳಾ ಅಭ್ಯರ್ಥಿ ಆಗಿದ್ದಾರೆ.ಅವರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಬಲ್ದೇವ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಗೋವಾ: 40 ಕ್ಷೇತ್ರಗಳಲ್ಲಿ 38ರಲ್ಲಿ ಬಿಜೆಪಿ ಸ್ಪರ್ಧೆ

ಪಣಜಿ: ಗೋವಾ ವಿಧಾನಸಭೆಯ 40‌ ಕ್ಷೇತ್ರಗಳ ಪೈಕಿ 38ರಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಪಕ್ಷದ ಸಂಸದೀಯ ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಅನುಮೋದಿಸಿದ ನಂತರ ಇದೇ 16ರ (ಭಾನುವಾರ) ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಶುಕ್ರವಾರ ಹೇಳಿದ್ದಾರೆ. 

ಕ್ರಿಶ್ಚಿಯನ್‌ ಸಮುದಾಯದ ಪ್ರಾಬಲ್ಯ ಇರುವ ಬೆನೌಲಿಂ ಮತ್ತು ನುವೆಂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡುತ್ತಿಲ್ಲ. ಹಾಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ಬಿಜೆಪಿ ಸಭೆ ನಡೆಸಿದೆ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಗೋವಾ ಚುನಾವಣೆಯ ಉಸ್ತುವಾರಿ ದೇವೇಂದ್ರ ಫಡಣವೀಸ್‌ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಗೋವಾ ಬಿಜೆಪಿ ಘಟಕದ ಅಧ್ಯಕ್ಷ ಸದಾನಂದ್‌ ಶೇಟ್‌ ತಾನವಾಡೆ, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತು ಇತರ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಬಿಜೆಪಿ ಮುಖಂಡರ ತಂಡ ಶನಿವಾರ ದೆಹಲಿಗೆ ತೆರಳಿ ಪಕ್ಷದ ಪ್ರಮುಖ ನಾಯಕರ ಜೊತೆ ಸಭೆ ನಡೆಸಲಿದೆ. ಅದರ ಮರುದಿನ ಪಕ್ಷದ ಸಂಸದೀಯ ಮಂಡಳಿಯು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದೆ ಎಂದು ಪ್ರಮೋದ್ ಸಾವಂತ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದರು.

ಚುನಾವಣೆ ಹತ್ತಿರವಾಗುತ್ತಲೇ ನಾಲ್ವರು ಶಾಸಕರು ಬಿಜೆಪಿ ತೊರೆದಿದ್ದಾರೆ. ಸದ್ಯ ಗೋವಾದ ಆಡಳಿತಾರೂಢ ಬಿಜೆಪಿಯಲ್ಲಿ 23 ಶಾಸಕರಿದ್ದಾರೆ. 

2017ರ ಚುನಾವಣೆಯಲ್ಲಿ ಬೆನೌಲಿಂ ಕ್ಷೇತ್ರದಿಂದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದಿಂದ (ಎನ್‌ಸಿಪಿ) ಚರ್ಚಿಲ್‌ ಅಲೆಮಾವೊ ಶಾಸಕರಾಗಿ ಆಯ್ಕೆ ಆಗಿದ್ದರು. ಕಳೆದ ತಿಂಗಳು ಅವರು ಎನ್‌ಸಿಪಿ ತೊರೆದು ಟಿಎಂಸಿಗೆ ಸೇರ್ಪಡೆ ಆದರು. ನುವೆಂ ಶಾಸಕ ವಿಲ್‌ಫ್ರೆಡ್‌ ಡೇಸಾ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಆಯ್ಕೆ ಆಗಿದ್ದರು. ಬಳಿಕ ಬಿಜೆಪಿಗೆ ಸೇರಿದ್ದರು.

ಈ ಬಾರಿ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳಾದ ಟಿಎಂಸಿ, ಎಎಪಿ, ಪಕ್ಷಗಳೂ ಇವೆ.

ಪಂಜಾಬ್: ‘ಕೈ’ ಅಭ್ಯರ್ಥಿಗಳ ಪಟ್ಟಿ ಅಂತಿಮ

ಪಂಜಾಬ್‌ ವಿಧಾನಸಭೆ ಚುನಾವಣೆಗೆ ತನ್ನ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಗುರುವಾರವೇ ಸಿದ್ಧಗೊಳಿಸಿದೆ. ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸುಮಾರು ಐದು ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಸಭೆಯಲ್ಲಿ ಒಮ್ಮತ ಮೂಡದ ಕಾರಣ ಗುರುವಾರವೇ ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗಪಡಿಸಲಿಲ್ಲ. ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ಸಮಿತಿಯು ಶುಕ್ರವಾರವೂ ಸಭೆ ನಡೆಸಿದೆ. ಮುಂದಿನ ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.