ಗುರುವಾರ , ಮಾರ್ಚ್ 23, 2023
30 °C
ಕೇಂದ್ರ ಸಚಿವ ಸಂಪುಟ ಪುನರ್‌ರಚನೆ *ಹೊಸದಾಗಿ ಏಳು ಮಂದಿ ಸೇರ್ಪಡೆ

ಚುನಾವಣೆಯತ್ತ ದೃಷ್ಟಿ ನೆಟ್ಟ ಪುನರ್‌ರಚನೆ: ಉತ್ತರ ಪ್ರದೇಶಕ್ಕೆ ಒಟ್ಟು 14 ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಇನ್ನೂ 7 ಮಂದಿಗೆ ಸಚಿವ ಸ್ಥಾನ ನೀಡಿದ್ದಾರೆ. ಕೇಂದ್ರ ಮಂತ್ರಿಮಂಡಲದಲ್ಲಿ ಉತ್ತರ ಪ್ರದೇಶದಿಂದ ಸಚಿವರಾದವರ ಸಂಖ್ಯೆ ಈ ಮೂಲಕ ದುಪ್ಪಟ್ಟಾಗಿದೆ.

ರಾಜನಾಥ್ ಸಿಂಗ್, ಮಹೇಂದ್ರನಾಥ್ ಪಾಂಡೆ, ವಿ.ಕೆ.ಸಿಂಗ್, ಕೃಷ್ಣ ಪಾಲ್, ಸಾಧ್ವಿ ನಿರಂಜನ ಜ್ಯೋತಿ ಮತ್ತು ಸಂಜೀವ್ ಬಾಲ್ಯನ್ ಅವರು ಮೋದಿ ಅವರ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಸಚಿವ ಸಂಪುಟದಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಬುಧವಾರ ಪ್ರಮಾಣವಚನ ಸ್ವೀಕರಿಸಿದ ಅನುಪ್ರಿಯಾ ಪಟೇಲ್, ಪಂಕಜ್ ಚೌಧರಿ, ಸತ್ಯಪಾಲ್ ಸಿಂಗ್ ಬಘೇಲ್, ಭಾನು ಪ್ರತಾಪ್ ಸಿಂಗ್ ವರ್ಮಾ, ಕೌಶಲ್ ಕಿಶೋರ್, ಬಿ.ಎಲ್.ವರ್ಮಾ ಮತ್ತು ಅಜಯ್ ಕುಮಾರ್ ತೇಣಿ ಅವರನ್ನು ಸೇರಿಸಿಕೊಂಡರೆ ಕೇಂದ್ರ ಮಂತ್ರಿಮಂಡಲದಲ್ಲಿ ಉತ್ತರ ಪ್ರದೇಶದವರ ಸಂಖ್ಯೆ 13ಕ್ಕೆ ಏರುತ್ತದೆ. ಗುಜರಾತ್‌ನವರಾದರೂ ಲೋಕಸಭೆಯಲ್ಲಿ ಉತ್ತರ ಪ್ರದೇಶದ ವಾರಾಣಸಿಯನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗಣನೆಗೆ ತೆಗೆದುಕೊಂಡರೆ ಈ ಸಂಖ್ಯೆ 14ಕ್ಕೆ ಏರುತ್ತದೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಕೇಂದ್ರವಾಗಿರಿಸಿಕೊಂಡೇ ಮಂತ್ರಿಮಂಡಲವನ್ನು ಪುನರ್‌ ರಚಿಸಲಾಗಿದೆ ಎನ್ನಲಾಗಿದೆ. ಹೊಸದಾಗಿ ಮಂತ್ರಿಮಂಡಲ ಸೇರಿದ ರಾಜ್ಯದ ಏಳು ಜನರಲ್ಲಿ ಸತ್ಯಪಾಲ್ ಸಿಂಗ್ ಬಘೇಲ್, ಭಾನು ಪ್ರತಾಪ್ ಸಿಂಗ್ ವರ್ಮಾ ಮತ್ತು ಕೌಶಲ್ ಕಿಶೋರ್ ಅವರು ದಲಿತ ಸಮುದಾಯದವರು. ದಲಿತ ಸಮುದಾಯವನ್ನು ಕಡೆಗಣಿಸಿಲ್ಲ ಎಂಬ ಸಂದೇಶ ನೀಡಲೆಂದೇ ಪ್ರಧಾನಿ, ಇವರಿಗೆ ಚುನಾವಣೆ ಹೊಸ್ತಿಲಲ್ಲಿ ಸಚಿವ ಸ್ಥಾನ ನೀಡಿದ್ದಾರೆ.

ಅಪ್ನಾ ದಳದ ಅನುಪ್ರಿಯಾ ಪಟೇಲ್ ಅವರು ಕುಮ್ರಿ ಸಮುದಾಯದವರು. ಹಲವು ಕ್ಷೇತ್ರಗಳಲ್ಲಿ ಈ ಸಮುದಾಯದ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಕುಮ್ರಿ ಜನರನ್ನು ಕಡೆಗಣಿಸಲಾಗಿದೆ ಎಂಬ ಸಂದೇಶ ಹೋಗಬಾರದು ಎಂಬ ಕಾರಣದಿಂದ ಅನುಪ್ರಿಯಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ, ಅದೂ ಸರ್ಕಾರ ರಚನೆಯಾಗಿ ಬರೋಬ್ಬರಿ ಎರಡು ವರ್ಷದ ನಂತರ ಎಂದು ವಿಶ್ಲೇಷಿಸಲಾಗಿದೆ.

ಬುಧವಾರ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಲ್ಲಿ ಏಳು ಮಂದಿ ಉತ್ತರ ಪ್ರದೇಶದವರಾಗಿದ್ದರೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕದ ತಲಾ ನಾಲ್ಕು ಮಂದಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲಾಗಿದೆ. ಗುಜರಾತ್‌ನ ಮೂವರು, ಮಧ್ಯಪ್ರದೇಶ ಮತ್ತು ಬಿಹಾರದ ತಲಾ ಇಬ್ಬರಿಗೆ ಅವಕಾಶ ದೊರೆತಿದೆ. ಇನ್ನು ರಾಜಸ್ಥಾನ ಮತ್ತು ಅಸ್ಸಾಂನ ಒಬ್ಬರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ದೊರೆತಿದೆ.

ಅಸ್ಸಾಂನಲ್ಲಿ ಸತತ ಎರಡನೇ ಬಾರಿಗೆ ಗೆಲ್ಲುವಲ್ಲಿ ಯಶಸ್ವಿಯಾದರೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಸರ್ವಾನಂದ ಸೋನೊವಾಲ್ ಅವರಿಗೆ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಲಾಗಿದೆ.

ಇವುಗಳನ್ನೂ ಓದಿ..

ಸದಾನಂದಗೌಡರ ಸಚಿವ ಸ್ಥಾನ ಕಸಿದ ‘ಮಾನಹಾನಿ’ ಪ್ರಕರಣ?

 

ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿ: ಉತ್ತರ ಪ್ರದೇಶಕ್ಕೆ ಮತ್ತೆ 7 ಮಂತ್ರಿ ಸ್ಥಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು