ಜಮ್ಮು: ಟ್ರಕ್‌ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಕೊಂದ ಭದ್ರತಾ ಸಿಬ್ಬಂದಿ

ಜಮ್ಮು: ಇಲ್ಲಿನ ಸಿಂಧ್ರಾ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆ ಸಿಬ್ಬಂದಿ ನಡುವೆ ಬೆಳಿಗ್ಗೆಯಿಂದ ನಡೆದ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಅನುಮಾನಾಸ್ಪದ ಟ್ರಕ್ ಚಲನೆಯನ್ನು ಪತ್ತೆ ಮಾಡಿದ ಪೊಲೀಸರು ಅದನ್ನು ತಡೆದಿದ್ದಾರೆ. ಈ ಸಂದರ್ಭ ಚಾಲಕ ಪರಾರಿಯಾಗಿದ್ದು, ಅದರಲ್ಲಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಯೂ ಪ್ರತಿ ದಾಳಿ ನಡೆಸಿದೆ. ಈ ಸಂದರ್ಭ ಮೂವರು ಉಗ್ರರು ಹತರಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಗುಂಡಿನ ಚಕಮಕಿಯಲ್ಲಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.
‘ಈ ಪ್ರದೇಶದಲ್ಲಿ ಅನುಮಾನಾಸ್ಪದ ಟ್ರಕ್ ಚಲಿಸುತ್ತಿರುವುದು ಗಮನಕ್ಕೆ ಬಂದಿತ್ತು. ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಅದನ್ನು ತಡೆದಿದ್ದಾರೆ. ವಾಹನ ತಪಾಸಣೆ ವೇಳೆ ಅದರಲ್ಲಿ ಅಡಗಿದ್ದ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿದಾಳಿ ನಡೆಸಿ ಎಲ್ಲ ಮೂವರೂ ಉಗ್ರರನ್ನು ಹತ್ಯೆ ಮಾಡಲಾಗಿದೆ’ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ಹೇಳಿದ್ದಾರೆ.
ಎನ್‌ಕೌಂಟರ್ ಆರಂಭವಾಗುತ್ತಿದ್ದಂತೆ ಸಂಪೂರ್ಣ ಪ್ರದೇಶವನ್ನು ಬಂದ್ ಮಾಡಲಾಗಿದ್ದು, ಹೆದ್ದಾರಿ ಸಂಚಾರ ಸಹ ಸ್ಥಗಿತಗೊಳಿಸಲಾಗಿದೆ.
ಅಪಾರ ಪ್ರಮಾಣದ ಮದ್ದು ಗುಂಡುಗಳ ಜೊತೆ ಮತ್ತಷ್ಟು ಉಗ್ರರು ಈ ಪ್ರದೇಶದಲ್ಲಿ ಅಡಗಿರುವ ಶಂಕೆಯನ್ನು ಭದ್ರತಾ ಪಡೆ ವ್ಯಕ್ತಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.