ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆ ನಿವೃತ್ತ ಅಧಿಕಾರಿ ಮೇಲಿನ ದಾಳಿ ಆರೋಪಿಗಳಿಗೆ ಜಾಮೀನು: ಬಿಜೆಪಿ ಪ್ರತಿಭಟನೆ

Last Updated 12 ಸೆಪ್ಟೆಂಬರ್ 2020, 14:19 IST
ಅಕ್ಷರ ಗಾತ್ರ
ADVERTISEMENT
""

ಅರಾಹ್‌ (ಬಿಹಾರ): ನೌಕಾಪಡೆಯ ನಿವೃತ್ತ ಅಧಿಕಾರಿಯ ಮೇಲೆ ಮುಂಬೈನಲ್ಲಿ ಹಲ್ಲೆ ನಡೆಸಿರುವುದು ‘ರಾಜ್ಯ ಪ್ರಾಯೋಜಿತ ಉಗ್ರ ಕೃತ್ಯವಾಗಿದೆ’ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಕಿಡಿಕಾರಿದ್ದಾರೆ. ಜೊತೆಗೆ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ‘ಗೂಂಡಾ ರಾಜ್ಯ’ವನ್ನು ಮುಂದುವರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಏನು ಆಗಿದೆಯೋ ಅದು ದೊಡ್ಡ ತಪ್ಪು. ಇದು ಒಂದು ರೀತಿಯಲ್ಲಿ ‘ರಾಜ್ಯ ಪ್ರಾಯೋಜಿತ ಉಗ್ರ ಕೃತ್ಯವಾಗಿದೆ’. ನಾನು ನಿನ್ನೆ (ಶುಕ್ರವಾರ) ಟ್ವೀಟ್‌ ಮೂಲಕ ತಿಳಿಸಿದ್ದಂತೆ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ‘ಗೂಂಡಾ ರಾಜ್ಯ’ವನ್ನು ಮುಂದುವರಿಸಬಾರದು. ಮಾಧ್ಯಮಗಳಲ್ಲಿ ಒತ್ತಡ ಕೇಳಿ ಬಂದ ಬಳಿಕ ನಿನ್ನೆ ಆರು ಜನರನ್ನು ಬಂಧಿಸಲಾಗಿತ್ತು. ಆದರೆ, ಕೇವಲ ಹತ್ತೇ ನಿಮಿಷಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ನಾನು ಮಹಾರಾಷ್ಟ್ರದಲ್ಲಿ ಹಿಂದೆಂದೂ ಇಂತಹ ಸನ್ನಿವೇಶವನ್ನು ಕಂಡಿರಲಿಲ್ಲ’ ಎಂದು ಮಾಧ್ಯಮಗಳೆದುರು ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಫಡಣವೀಸ್ ಇಲ್ಲಿಗೆ (ಬಿಹಾರಕ್ಕೆ) ಎರಡು ದಿನಗಳ ಭೇಟಿ ಸಲುವಾಗಿ ಆಗಮಿಸಿದ್ದಾರೆ.

‘ಅತ್ಯಂತ ದುಃಖಕರ ಮತ್ತು ಆಘಾತಕಾರಿ ಘಟನೆ. ವಾಟ್ಸ್ಆ್ಯಪ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡ ಮಾತ್ರಕ್ಕೆ ನಿವೃತ್ತ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದೆ. ಗೌರವಾನ್ವಿತ ಉದ್ಧವ್‌ ಠಾಕ್ರೆ ಜೀ.. ದಯವಿಟ್ಟು ಗೂಂಡಾ ರಾಜ್‌ ಅನ್ನು ನಿಲ್ಲಿಸಿ. ಕಠಿಣ ಕ್ರಮ ಕೈಗೊಂಡು ಗೂಂಡಾಗಳಿಗೆ ಶಿಕ್ಷೆ ವಿಧಿಸಬೇಕೆಂದುಒತ್ತಾಯಿಸುತ್ತೇವೆ’ ಎಂದು ಫಡಣವೀಸ್ ಶುಕ್ರವಾರ ಟ್ವೀಟ್‌ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿತ್ತು.

ತಾವು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡ ಬಳಿಕ ಶಿವಸೇನೆಯ ಗೂಂಡಾಗಳು ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್‌ ಶರ್ಮಾ ಶುಕ್ರವಾರ ಆರೋಪಿಸಿದ್ದರು. ಆಡಳಿತ ಪಕ್ಷದ ಕಮಲೇಶ್‌ ಕದಂ ಮತ್ತು ಉಳಿದ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಆರೋಪಿಗಳ ಬಿಡುಗಡೆ ವಿರೋಧಿಸಿ ಪ್ರತಿಭಟನೆ
ಮುಂಬೈ:
ಹಲ್ಲೆ ಪ್ರಕರಣಕ್ಕೆ ಸಂಬಂಧ ಬಂಧಿಸಲಾಗಿದ್ದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಫಿಸಿ ಮದನ್‌ ಶರ್ಮಾ ಅವರ ಮಗಳು ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದವರು ಶಿವಸೇನೆಯ ಕಾರ್ಯಕರ್ತರು ಎಂದು ಆರೋಪಿಸಿ, ಹೆಚ್ಚುವರಿ ಪೊಲೀಸ್‌ ಆಯುಕ್ತರ ಕಚೇರಿ ಎದುರು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಬಿಜೆಪಿ ಶಾಸಕ ಅತುಲ್‌ ಭಟ್ಖಾಲ್ಕರ್‌ ಅವರು, ‘ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಸೇನೆಯ ಎರಡು ಘಟಕಗಳ ಮುಖ್ಯಸ್ಥರು ಮತ್ತು ಕೆಲ ಕಾರ್ಯಕರ್ತರು ನಿವೃತ್ತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ನಾವು ದೂರು ನೀಡಿದ್ದೇವೆ. ಪ್ರಕರಣ ಸಂಬಂಧ ಆರು ಮಂದಿಯನ್ನು ನಿನ್ನೆ ರಾತ್ರಿ ಪೊಲೀಸರು ಬಂಧಿಸಿದ್ದರು. ಆದರೆ, ಇಂದು ಬೆಳಗ್ಗೆ 9 ಗಂಟೆ ಆಗುವಷ್ಟರಲ್ಲಿ ಎಲ್ಲರಿಗೂ ಜಾಮೀನು ನೀಡಲಾಗಿದೆ. ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ, ಆರೋಪಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ಹಾಗೂ ಸೆಕ್ಷನ್‌ 326ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ವಿಶ್ವಾಸ್‌ ನಂಗೆರೆ ಪಾಟಿಲ್‌, ಸೆಕ್ಷನ್‌ 326ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗದು. ಆದರೆ, ಆಕ್ರಮಣ ಮಾಡಿದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ತನಿಖೆ ನಡೆಸುತ್ತಿದ್ದೇವೆ. ಸಾಕ್ಷ್ಯ ದೊರೆತರೆ, ಸೆಕ್ಷನ್‌ 452ರ ಅಡಿಯಲ್ಲಿ ಪ್ರಕರಣ ದಾಖಲಿಸಲಿದ್ದೇವೆ ಎಂದಿದ್ದಾರೆ.

‘ಈ ಸಂಬಂಧ 6 ಜನರನ್ನು ಬಂಧಿಸಿದ್ದೆವು ಮತ್ತು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೆವು. ಆದರೆ, ನಾವುದಾಖಲಿಸಿದ್ದ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಅವಕಾಶ ಇದ್ದುದ್ದರಿಂದ ಮತ್ತು ಸದ್ಯ ಕೋವಿಡ್–19 ಪರಿಸ್ಥಿತಿ ಇರುವುದರಿಂದ ಜಾಮೀನು ನೀಡಲೇಬೇಕಾಯಿತು. ಆರೋಪಿಗಳು ಆಕ್ರಮಣ ಮಾಡಿದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ದಾಖಲಿಸುತ್ತಿದ್ದೇವೆ. ಸಾಕ್ಷ್ಯ ದೊರೆತರೆ ಪ್ರಕರಣ ದಾಖಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT