ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಉತ್ಸವ: ‘ಅಮೃತ’ ಸಂಭ್ರಮದಲ್ಲಿ ಭಾರತ

ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ
Last Updated 14 ಆಗಸ್ಟ್ 2022, 21:45 IST
ಅಕ್ಷರ ಗಾತ್ರ

ನವದೆಹಲಿ: ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತೇಲಾಡುತ್ತಿದೆ. ‘ಪ್ರತಿ ಮನೆಗೂ ತ್ರಿವರ್ಣ ಧ್ವಜ’ ಅಭಿಯಾನದಿಂದಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯಿಂದ ದೇಶದ ಜನರನ್ನು ಉದ್ದೇಶಿಸಿ ಸೋಮವಾರ ಬೆಳಿಗ್ಗೆ ಮಾತನಾಡಲಿದ್ದಾರೆ.

ಪ್ರಧಾನಿ ತಮ್ಮ ಭಾಷಣದಲ್ಲಿ ಮಹತ್ವದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ‘ಭಾರತದಲ್ಲಿ ಚಿಕಿತ್ಸೆ ಪಡೆಯಿರಿ’, ‘ಪ್ರಧಾನ ಮಂತ್ರಿ ಸಮಗ್ರ ಸ್ವಾಸ್ಥ್ಯ ಯೋಜನೆ’ ಸೇರಿ ಹಲವು ಯೋಜನೆಗಳು ಘೋಷಣೆ ಆಗಬಹುದು. ಸತತ ಒಂಬತ್ತನೇ ವರ್ಷ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣ ಮಾಡಲಿದ್ದಾರೆ. ಹಿಂದಿನ ವರ್ಷಗಳ ಭಾಷಣಗಳಲ್ಲಿ ಅವರು ಮಹತ್ವದ ಯೋಜನೆಗಳನ್ನು ಘೋಷಿಸಿದ್ದರು.

ದೇಶದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 76ನೇ ಸ್ವಾತಂತ್ರ್ಯೋತ್ಸವದ ಸಲುವಾಗಿ ಮುಖ್ಯ ಕಾರ್ಯಕ್ರಮ ನಡೆಯಲಿರುವ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಸಂಭ್ರಮಾಚರಣೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.

ಮೊಘಲರ ಕಾಲದ ಈ ಸ್ಮಾರಕದ ಸುತ್ತಲೂ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ ಗುರುತಿಸುವಿಕೆ ವ್ಯವಸ್ಥೆ (ಎಫ್‌ಆರ್‌ಎಸ್‌) ಇರುವ ಕ್ಯಾಮೆರಾಗಳನ್ನು ಕೆಂಪುಕೋಟೆಯ ದ್ವಾರದಲ್ಲಿ ಅಳವಡಿಸಲಾಗಿದೆ. ಹಲವು ಹಂತದ ಭದ್ರತೆ ಏರ್ಪಡಿಸಲಾಗಿದೆ. ಕೆಂಪುಕೋಟೆ ಪ್ರದೇಶದಲ್ಲಿ ಗಾಳಿಪಟ ಮತ್ತು ಇತರ ಹಾರುವ ವಸ್ತುಗಳನ್ನು ಕೆಳಕ್ಕೆ ಉರುಳಿಸುವುದಕ್ಕಾಗಿ 400ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಂಪುಕೋಟೆ ಸುತ್ತಲಿನ ಐದು ಕಿ.ಮೀ. ಪ್ರದೇಶವನ್ನು ‘ಗಾಳಿಪಟ ನಿಷೇಧಿತ ವಲಯ’ ಎಂದು ಘೋಷಿಸಲಾಗಿದೆ.

ಕೆಂಪುಕೋಟೆಯ ಕಾರ್ಯಕ್ರಮದಲ್ಲಿ ಸುಮಾರು ಏಳು ಸಾವಿರ ಆಹ್ವಾನಿತರು ಭಾಗವಹಿಸುವ ನಿರೀಕ್ಷೆ ಇದೆ.

ಮುಂಬೈ, ಬೆಂಗಳೂರು ಸೇರಿ ದೇಶದ ಎಲ್ಲ ಮಹಾನಗರಗಳಲ್ಲಿಯೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬೀದಿಗಳಲ್ಲಿ ಪೊಲೀಸರನ್ನು ನಿಯೋಜಿಸುವುದರ ಜತೆಗೆ, ಡ್ರೋನ್‌ ತಡೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸ್ವಾತಂತ್ರ್ಯ ದಿನದಂದು ವಿಧ್ವಂಸಕ ಕೃತ್ಯ ನಡೆಯಬಹುದು ಎಂಬ ಗುಪ್ತಚರ ಮಾಹಿತಿಯೇನೂ ಸಿಕ್ಕಿಲ್ಲ. ಆದರೆ, ಮಹತ್ವದ ಎಲ್ಲ ಕೇಂದ್ರಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ–ಕಾಂಗ್ರೆಸ್ ವಾಕ್ಸಮರ:ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಹಾಗೂ ಮುಸ್ಲಿಂ ಲೀಗ್ ಕಾರಣ ಎಂದು ಬಿಜೆಪಿ ಆರೋಪಿಸಿದೆ.ಏಳು ನಿಮಿಷಗಳ ವಿಡಿಯೊದಲ್ಲಿ, ‘ದೇಶ ವಿಭಜನೆಗೆ ನೆಹರೂ ಕಾರಣ. ಭಾರತೀಯ ಸಂಸ್ಕೃತಿ, ಮೌಲ್ಯದ ಅರಿವಿಲ್ಲದವರು ವಿಭಜನೆ ಮಾಡಿದರು. ಈ ಅವಧಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸುವ ಯತ್ನವನ್ನೂ ಕಾಂಗ್ರೆಸ್ ಮಾಡಿಲ್ಲ’ ಎಂದು ಆರೋಪಿಸಲಾಗಿದೆ.

‘ದೇಶ ವಿಭಜನೆಯ ಭಯಾನಕತೆ ನೆನಪಿನ ದಿನ’ ಆಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರುವಿಭಜನೆ ವೇಳೆ ಪ್ರಾಣ ಕಳೆದುಕೊಂಡವರಿಗೆ ಭಾನುವಾರ ಗೌರವ ನಮನ ಸಲ್ಲಿಸಿದರು.ಟ್ವೀಟ್ ಮಾಡಿರುವ ಪ್ರಧಾನಿ, ದೇಶ ವಿಭಜನೆಯ ವೇಳೆ ನರಳಿದ ಜನರ ಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.‘ಭಾರತದ ಇತಿಹಾಸದ ಅಮಾನವೀಯ ಅಧ್ಯಾಯವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಗೃಹಸಚಿವ ಅಮಿತ್ ಶಾ ಹೇಳಿದರು.ಆದರೆ, ಇಂತಹ ಆಘಾತಕಾರಿ ಘಟನೆಗಳನ್ನು ಆಡಳಿತಾರೂಢ ಪಕ್ಷವು ರಾಜಕೀಯದ ಸರಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಭವ್ಯ ಭಾರತ ಕಟ್ಟಲು ಮುರ್ಮು ಕರೆ:ಪ್ರತಿಯೊಬ್ಬ ನಾಗರಿಕ ಭವ್ಯ ಭಾರತ ನಿರ್ಮಾಣದ ಪಣತೊಡಬೇಕು. ದೇಶದ ಸುರಕ್ಷತೆ, ಭದ್ರತೆ, ಪ್ರಗತಿ ಮತ್ತು ಸಮೃದ್ಧಿಗಾಗಿ ದುಡಿಯಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರೆ ನಿಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಭಾನುವಾರ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಅವರ ಮೊದಲ ಭಾಷಣ.‘ಈ 75 ವರ್ಷಗಳಲ್ಲಿ ಕಲಿತ ಪಾಠಗಳು, ದೇಶವು ಸ್ವಾತಂತ್ರ್ಯದ 100ನೇ ವರ್ಷದತ್ತ ಸಾಗಲು ನೆರವಿಗೆ ಬರಲಿವೆ. ದೇಶವು ನಮಗೆಲ್ಲವನ್ನೂ ನೀಡಿದೆ. ಭವ್ಯ ಭಾರತದ ನಿರ್ಮಾಣದಲ್ಲೇ ನಮ್ಮೆಲ್ಲರ ಸಾರ್ಥಕತೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT