ಮಂಗಳವಾರ, ಡಿಸೆಂಬರ್ 7, 2021
23 °C

ಬಾಂಗ್ಲಾ ದುರ್ಗಾಪೂಜೆ ಹಿಂಸಾಚಾರ ಮುಂದುವರಿಕೆ: ಅಲ್ಪಸಂಖ್ಯಾತರಿಂದ ಉಪವಾಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ‘ಬಾಂಗ್ಲಾದೇಶದಲ್ಲಿ ದುರ್ಗಾಪೂಜೆ ಆಚರಣೆಯ ವೇಳೆ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಾರ್ಥನಾ ಸ್ಥಳದ ಮೇಲೆ ಶನಿವಾರ ಅಪರಿಚಿತರ ಮುಸ್ಲಿಮರಿಂದ ದಾಳಿ ನಡೆದಿದೆ. ದೇಶದಲ್ಲಿ ಕೋಮುಗಲಭೆ ಮುಂದುವರಿದಿದ್ದು, ಅಲ್ಪಸಂಖ್ಯಾತ ಹಿಂದೂಗಳು ಘಟನೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ’ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ರಾಜಧಾನಿ ಢಾಕಾದಿಂದ 17 ಕಿ.ಮೀ. ದೂರವಿರುವ ಫೆನಿ ಪ್ರದೇಶದಲ್ಲಿ ಹಿಂದೂಗಳ ಒಡೆತನದ ದೇವಸ್ಥಾನ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ, ದರೋಡೆ ಮಾಡಲಾಗಿದೆ. ದುರ್ಗಾಪೂಜೆ ಸ್ಥಳಗಳಲ್ಲಿ ದಾಳಿ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರ ಮೇಲೆ ದಾಳಿ ನಡೆದ ನಂತರ ದೇವಸ್ಥಾನ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ‘ದ ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

‘ದಾಳಿಯಲ್ಲಿ ಫೆನಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ನಿಜಾಮುದ್ದೀನ್ ಸೇರಿದಂತೆ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ’ ಎಂದೂ ವರದಿ ತಿಳಿಸಿದೆ.

ಮುಸ್ಲಿಂ ಮತಾಂಧರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಇದುವರೆಗೆ ಒಟ್ಟು ಐದು ಮಂದಿ ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ದಾಳಿ, ಹಿಂಸಾಚಾರ  ಮತ್ತು ಕೋಮುಗಲಭೆ ನಡೆದ ವಿವಿಧ ಸ್ಥಳಗಳಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ.

ಈ ಮಧ್ಯೆ ಚಿತ್ತಗಾಂಗ್‌ನಲ್ಲಿನ ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಒಕ್ಕೂಟವು ದುರ್ಗಾಪೂಜೆ ಆಚರಣೆ ವೇಳೆ ನಡೆದ ದಾಳಿಗಳನ್ನು ಖಂಡಿಸಿ ಅ. 23ರಿಂದ ಉಪವಾಸ ಸತ್ಯಾಗ್ರಹ ಮತ್ತು ಧರಣಿ ನಡೆಸುವುದಾಗಿ ಘೋಷಿಸಿದೆ. ಈ ಘೋಷಣೆಗೂ ಮುನ್ನ ಒಕ್ಕೂಟವು ಚಿತ್ತಗಾಂಗ್‌ನಲ್ಲಿ ಆರು ತಾಸುಗಳ ಮುಷ್ಕರವನ್ನು ನಡೆಸಿತು.

ಢಾಕಾದ ಶಹಭಾಗ್ ಮತ್ತು ಚಿತ್ತಗಾಂಗ್‌ನ ಅಂದರ್ಕಿಲ್ಲಾದಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ವಕೀಲ ರಾಣಾ ದಾಸ್‌ ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಸ್ಕಾನ್‌ನ ಬಾಂಗ್ಲಾದೇಶದ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ್ ಬ್ರಹ್ಮಚಾರಿ, ‘ಸಮುದಾಯಗಳು ಮೌನವಾಗಿ ಕುಳಿತು ದಾಳಿ ನಡೆಯುವುದನ್ನು ನೋಡುವುದಿಲ್ಲ’ ಎಂದೂ ಎಚ್ಚರಿಸಿದರು.

‘ಹಿಂದೂ ದೇವಾಲಯಗಳು, ಅಂಗಡಿ ಮತ್ತು ದುರ್ಗಾಪೂಜೆ ವೇಳೆ ನಡೆದ ಹಿಂಸಾಚಾರದ ಆರೋಪಿಗಳನ್ನು ಬಂಧಿಸಲಾಗುವುದು. ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಆರೋಪಿಗಳು ಯಾವ ಧರ್ಮಕ್ಕೆ ಸೇರಿದವರೇ ಆಗಿರಲಿ ಅವರನ್ನು ಶಿಕ್ಷಿಸಲಾಗುವುದು’ ಎಂದು ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದ್ದಾರೆ.

ಅಲ್ಪಸಂಖ್ಯಾತರ ಪರ ವಹಿಸಲು ಕರೆ

ಕೋಲ್ಕತ್ತ (ಪಿಟಿಐ): ಬಾಂಗ್ಲಾದಲ್ಲಿ ದುರ್ಗಾಪೂಜೆ ವೇಳೆ ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿರುವ ಮುಸ್ಲಿಮರ ಪ್ರತಿನಿಧಿ ಸಂಘಟನೆ ಬಂಗಾಳ ಇಮಾಮ್ಸ್  ಅಸೋಸಿಯೇಷನ್, ಈ ಸಂದರ್ಭದಲ್ಲಿ ಭಾರತ ಮತ್ತು ನೆರೆಹೊರೆಯ ದೇಶಗಳ ಅಲ್ಪಸಂಖ್ಯಾತರ ಪರ ನಿಲ್ಲಬೇಕೆಂದು ಕರೆ ನೀಡಿದೆ.

‘ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ನಾವು, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆವು. ನಾವು ಈ ಸಮಯದಲ್ಲಿ ಅವರ ಪರವಾಗಿ ನಿಲ್ಲುತ್ತೇವೆ’ ಎಂದು ಬಂಗಾಳ ಇಮಾಮ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ.ಯಾಹಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು,ನಕಲಿ ಮಾಹಿತಿ ಮತ್ತು ಚಿತ್ರಗಳನ್ನು ಹರಡುವ ಮೂಲಕ ಘರ್ಷಣೆಗಳನ್ನು ಹುಟ್ಟುಹಾಕುವ ಪ್ರಯತ್ನಗಳ ವಿರುದ್ಧ ಜಾಗರೂಕರಾಗಿರಬೇಕು’ ಎಂದೂ ಅವರು ಜನರಿಗೆ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು