ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ ಕಲಾವಿದನಿಂದ ಸಿಎಂ ಪಟ್ಟಕ್ಕೆ.. ಭಗವಂತ ಮಾನ್‌ ಯಶೋಗಾಥೆ

Last Updated 10 ಮಾರ್ಚ್ 2022, 21:31 IST
ಅಕ್ಷರ ಗಾತ್ರ

ಚಂಡಿಗಡ: ಅಭೂತಪೂರ್ವ ಜಯದೊಂದಿಗೆ ಪಂಜಾಬ್‌ನ ಮುಖ್ಯಮಂತ್ರಿ ಸ್ಥಾನಕ್ಕೇರಲು ಅಣಿಯಾಗಿರುವ ಆಮ್‌ ಆದ್ಮಿ ಪಕ್ಷ (ಆಪ್)ದ ಭಗವಂತ ಮಾನ್‌, ರಾಜಕಾರಣ ಪ್ರವೇಶಿಸಿದ್ದು ದಶಕದ ಹಿಂದಷ್ಟೇ. ಅತ್ಯಲ್ಪ ಕಾಲದಲ್ಲೇ ಉನ್ನತ ಹುದ್ದೆ ತಲುಪುತ್ತಿರುವುದರ ಹಿಂದೆ ಸಾಕಷ್ಟು ಶ್ರಮವೂ ಇದೆ.

ಹಾಸ್ಯ ಕಲಾವಿದನಾಗಿ ಪಂಜಾಬಿ ಭಾಷೆಯ ಎರಡು ಸಿನಿಮಾಗಳಲ್ಲೂ ನಟಿಸಿರುವ ಮಾನ್‌, ಕಿರುತೆರೆಯ ಕೆಲವು ಹಾಸ್ಯ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನೀಡಿ ಜನಪ್ರಿಯರಾದವರು.

‘ಸಂಸದನಾಗಿ ಆಯ್ಕೆಯಾದಾಗ ಜನ ನನ್ನನ್ನು ನೋಡಿ ನಕ್ಕಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಅದೇ ಜನ ನನ್ನ ಬಳಿ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತ ಅಳುತ್ತಾರೆ. ಅವರ ನೋವಿನ ಕಥೆ ಕೇಳಿದಾಗ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಇದೆ ಎಂಬುದು ನನ್ನ ಅರಿವಿಗೆ ಬಂದಿತ್ತು’ ಎಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ
ದಾಗ ಮಾನ್‌ ಪ್ರತಿಕ್ರಿಯಿಸಿದ್ದರು.

2011ರಲ್ಲಿ ಶಿರೋಮಣಿ ಅಕಾಲಿ ದಳದ ವಿರುದ್ಧ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಸ್ಥಾಪಿಸಿದ್ದ ಪೀಪಲ್ಸ್‌ ಪಾರ್ಟಿ ಆಫ್‌ ಪಂಜಾಬ್‌ (ಪಿಪಿಪಿ) ಮೂಲಕ ತಮ್ಮ ರಾಜಕೀಯ ಪಯಣ ಆರಂಭಿಸಿದ ಮಾನ್‌, 2012ರ ವಿಧಾನಸಭೆ ಚುನಾವಣೆಯಲ್ಲಿ ಸಂಗ್ರೂರ್‌ ಜಿಲ್ಲೆಯ ಲೆಹ್ರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ನ ರಾಜಿಂದರ್‌ ಕೌರ್‌ ಭಟ್ಟಲ್‌ ವಿರುದ್ಧ ಸೋಲುಂಡರು.

ಪಿಪಿಪಿಯು ಮುಂದೆ ಕಾಂಗ್ರೆಸ್‌ನೊಂದಿಗೆ ವಿಲೀನವಾದಾಗ, 2014ರಲ್ಲಿ ಎಎಪಿ ಸೇರ್ಪಡೆಗೊಂಡರು. ಸಂಗ್ರೂರ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಕಾಲಿದಳದ ಮುಖಂಡ ಸುಖದೇವ ಸಿಂಗ್‌ ದಿಂಡ್ಸಾ ವಿರುದ್ಧ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಜಯಗಳಿಸಿ ಗಮನ ಸೆಳೆದಿದ್ದರು.

2017ರಲ್ಲಿ ಅರವಿಂದ್‌ ಕೇಜ್ರಿವಾಲ್‌ ಸೂಚನೆಯ ಮೇರೆಗೆ ವಿಧಾನಸಭೆ ಚುನಾವಣೆಯಲ್ಲೂ ಮಾನ್‌ ಸ್ಪರ್ಧಿಸಿದ್ದರು. ಜಲಾಲಾಬಾದ್‌ನಲ್ಲಿ ಅಕಾಲಿದಳದ ಸುಖಬೀರ್‌ ಸಿಂಗ್‌ ಬಾದಲ್‌ ವಿರುದ್ಧ ಸೆಣಸಿದರಾದರೂ ಯಶಸ್ಸು ಸಿಗಲಿಲ್ಲ. ಆದರೆ, 2019ರ ಚುನಾವಣೆಯಲ್ಲಿ ಮತ್ತೆ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಸತತ ಎರಡನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು.

1973ರ ಅಕ್ಟೋಬರ್‌ನಲ್ಲಿ ಸಂಗ್ರೂರು ಜಿಲ್ಲೆಯ ಸಾತೋಜ್ ಗ್ರಾಮದಲ್ಲಿ ಮಾನ್ ಜನಿಸಿದರು. ಪಕ್ಕದ ಸುನಮ್‌ ಪಟ್ಟಣದದ ಶಹೀದ್ ಉಧಾಮ್‌ ಸಿಂಗ್ ಸರ್ಕಾರಿ ಕಾಲೇಜಿನಲ್ಲಿ ವಾಣಿಜ್ಯ ಪದವಿಗೆ ಪ್ರವೇಶ ಪಡೆದರಾದರೂ, ಕೋರ್ಸ್ ಪೂರ್ಣಗೊಳಿಸಲಿಲ್ಲ. ಆದರೂ ಹಾಸ್ಯ ಭಾಷಣಕಾರರಾಗಿದ್ದ ಅವರಿಗೆ ಕಾಲೇಜು ಆಡಳಿತ ಮಂಡಳಿಯು ಯುವಜನೋತ್ಸವಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿತ್ತು ಎಂಬುದು ವಿಶೇಷ. ಅವರ ಅನೇಕ ಹಾಸ್ಯ ವಿಡಿಯೊಗಳು ಮತ್ತು ಸಂಗೀತ ಆಲ್ಬಮ್‌ಗಳು ಹೊರಬಂದಿವೆ.

ಪ್ರಸಕ್ತ ಚುನಾವಣೆಯಲ್ಲಿ ಸಂಗ್ರೂರ್‌ ಜಿಲ್ಲೆಯ ಧುರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ 58,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದಾರೆ. ಹೋದಲ್ಲೆಲ್ಲ ಸಭಿಕರನ್ನು ಆಕರ್ಷಿಸುವ ಮಾನ್‌, ಚುನಾವಣೆ ಸಂದರ್ಭ ರಾಜ್ಯದಾದ್ಯಂತ ಪ್ರಚಾರ ನಡೆಸಿದ್ದರು.

‘ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿದ್ದಾರೆ’ ಎಂದು ಚುನಾವಣೆಗೆ ಮೊದಲೇ
ಘೋಷಿಸಿದ್ದ ಕೇಜ್ರಿವಾಲ್‌, ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಮುಂದಾದಾಗ ಬರೊಬ್ಬರಿ 21 ಲಕ್ಷ ಜನ (ಶೇ 90ರಷ್ಟು) ಮಾನ್‌ ಪರ ಮತ ಚಲಾಯಿಸಿದ್ದರು.

ಮದ್ಯ ಸೇವನೆಯ ಹವ್ಯಾಸ ಮಾನ್‌ ಅವರಿಗೆ ಕೆಲವೊಮ್ಮೆ ಮುಜುಗರ ತಂದಿದೆ. 2016ರಲ್ಲಿ ಅವರದೇ ಪಕ್ಷದ ಇನ್ನೊಬ್ಬ ಸಂಸದ ಹರಿಂದರ್‌ ಸಿಂಗ್‌ ಖಾಸ್ಲಾ ಖುದ್ದಾಗಿ ಲೋಕಸಭೆಯ ಸ್ಪೀಕರ್‌ಗೆ ದೂರು ನೀಡಿ, ತಮ್ಮ ಆಸನದ ಸ್ಥಳವನ್ನು ಬದಲಿಸುವಂತೆ ಕೋರಿದಾಗ, ಮಾನ್‌ ಕುಡಿದು ಕಲಾಪದಲ್ಲಿ ಭಾಗವಹಿಸುತ್ತಾರೆ ಎಂದು ಆರೋಪಿಸಿದ್ದರು.

2019ರ ಚುನಾವಣೆ ವೇಳೆ ವಿಪಕ್ಷಗಳ ಅಭ್ಯರ್ಥಿಗಳು ‘ಕುಡಿತದ ಚಟದ ಮಾನ್‌ ಸಂಜೆಯ ನಂತರ ಕೈಗೇ ಸಿಗುವುದಿಲ್ಲ. ಅವರಿಗೆ ಮತ ಹಾಕಿ ಪ್ರಯೋಜನವೇನು’ ಎಂದೂ ಆರೋಪಿಸಿದ್ದರು. ಈ ಆರೋಪದಿಂದ ಎಚ್ಚೆತ್ತ ಮಾನ್‌, ಪ್ರಚಾರ ಸಭೆಯೊಂದರಲ್ಲಿ ತಮ್ಮ ತಾಯಿ ಹಾಗೂ ಕೇಜ್ರಿವಾಲ್‌ ಸಮ್ಮುಖದಲ್ಲೇ ಕುಡಿತ ತ್ಯಜಿಸುವುದಾಗಿ ಘೋಷಿಸಿದ್ದರಲ್ಲದೆ, ‘ಕೆಲವರು ನಾನು ಹುಟ್ಟುಕುಡುಕ ಎಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಪ್ರತ್ಯುತ್ತರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT