ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗವತ್‌– ಇಮಾಮ್‌ ಸಂಘದ ಅಧ್ಯಕ್ಷರ ಭೇಟಿ: ಆರ್‌ಎಸ್‌ಎಸ್‌ ಸಮರ್ಥನೆ

Last Updated 23 ಸೆಪ್ಟೆಂಬರ್ 2022, 13:33 IST
ಅಕ್ಷರ ಗಾತ್ರ

ನವದೆಹಲಿ: ‘ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಸೀದಿಗೆ ಭೇಟಿ ನೀಡಿರುವುದು ಮತ್ತು ಇಮಾಮ್‌ಗಳ ಸಂಘದ ಮುಖ್ಯಸ್ಥರ ಭೇಟಿ ಆಗುವುದರ ಅರ್ಥ ಸಂಘವು ತನ್ನ ಸಿದ್ಧಾಂತವನ್ನು ಬದಲಿಸಿದೆ ಎಂಬುದಲ್ಲ’ ಎಂದು ಸಂಘದ ಹಿರಿಯ ಮುಖಂಡರಾದ ಇಂದ್ರೇಶ್‌ ಕುಮಾರ್‌ ಶುಕ್ರವಾರ ಹೇಳಿದರು.

‘ಭಾಗವತ್ ಮತ್ತು ಅಖಿಲ ಭಾರತ ಇಮಾಮ್‌ ಸಂಘಟನೆಯ ಮುಖಂಡ ಉಮೇರ್‌ ಅಹಮ್ಮದ್‌ ಇಲ್ಯಾಸಿ ನಡುವಿನ ಭೇಟಿಯು ಕಾಂಗ್ರೆಸ್‌ ಪಕ್ಷ ಕೈಗೊಂಡಿರುವ ‘ಭಾರತ್‌ ಜೋಡೊ’ ಅಭಿಯಾನದ ಪರಿಣಾಮವಾಗಿದೆ’ ಎಂಬ ಕಾಂಗ್ರೆಸ್‌ ಪಕ್ಷದ ಹೇಳಿಕೆಯನ್ನು ಅವರು ಅಲ್ಲಗಳೆದರು.

ಕಾಂಗ್ರೆಸ್ ಪಕ್ಷವು ಆರ್‌ಎಸ್‌ಎಸ್‌ನ ಚಿಂತನಾಶೈಲಿಯನ್ನೇ ತಪ್ಪಾಗಿ ಅರ್ಥಮಾಡಿಕೊಂಡಿದೆ ಎಂದು ಇಂದ್ರೇಶ್‌ಕುಮಾರ್ ಅವರು ಪ್ರತಿಪಾದಿಸಿದರು. ಇಲ್ಲಿನ ತೀನ್‌ ಮೂರ್ತಿ ಚೌಕ್‌ನಲ್ಲಿ ಆಯೋಜಿಸಿದ್ದ 104ನೇ ಹೈಫಾ ವಿಜಯದ ದಿನ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಆರ್‌ಎಸ್‌ಎಸ್ ಸಂಘದ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಹಾಗೇ ಇದೆ. ಮುಂದೆಯೂ ಹಾಗೆಯೇ ಮುಂದುವರಿಯಲಿದೆ. ಈ ಕುರಿತು ತಪ್ಪುಗ್ರಹಿಕೆ ಮೂಡಿಸುವ ಯತ್ನಗಳು ನಡೆಯುತ್ತಿರುತ್ತವೆ’ ಎಂದು ಅವರು ಪ್ರತಿಪಾದಿಸಿದರು.

ಅಲ್ಪಸಂಖ್ಯಾತ ಸಮುದಾಯದ ಜೊತೆಗಿನ ಸಂವಾದದ ಭಾಗವಾಗಿ ಭಾಗವತ್ ಮತ್ತು ಇಲ್ಯಾಸಿ ಭೇಟಿ ನಡೆದಿದೆ. ಇಂಥ ಯತ್ನ 20 ವರ್ಷದ ಹಿಂದೆಯೇ ಆರಂಭವಾಗಿದೆ. ಈಗ ಯಾರಾದರೂ ಇದರ ಹಿರಿಮೆ ಪಡೆಯಲು ಯತ್ನಿಸಬಹುದು. ಸಂಘದ ವಿರುದ್ಧ ಟೀಕೆ ಮುಂದುವರಿದರೆ ಅದಕ್ಕಾಗಿ ಕಾಂಗ್ರೆಸ್‌ ಪಶ್ಚಾತ್ತಾಪ ಪಡಬೇಕಾದಿತು ಎಂದು ಎಚ್ಚರಿಸಿದರು.

‘ಮದರಸಾಗೆ ಭೇಟಿ ನೀಡಿದ್ದಾಗ ಭಾಗವತ್‌ ಅವರು ಅಲ್ಲಿನ ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳು ಕುರ್‌ಆನ್‌ ಪಠಿಸುವುದನ್ನು ಕೇಳಿದರು. ಮಕ್ಕಳು ಇದೇ ಸಂದರ್ಭದಲ್ಲಿ ‘ವಂದೇ ಮಾತರಂ’, ‘ಜೈ ಹಿಂದ್’ ಘೋಷಣೆಗಳನ್ನೂ ಮೊಳಗಿಸಿದ್ದಾರೆ. ಮಕ್ಕಳು ಈ ದೇಶದ ಬಗ್ಗೆ ಹೆಚ್ಚು ತಿಳಿಯಬೇಕು. ತಾವು ಪಾಲಿಸುವ ಧರ್ಮವು ಯಾವುದೇ ಇರಲಿ. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು ಎಂದು ಭಾಗವತ್‌ ಅವರು ಮಕ್ಕಳಿಗೆ ಹೇಳಿದ್ದಾರೆ’ ಎಂದು ಇಂದ್ರೇಶ್‌ ಕುಮಾರ್ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT