ಬುಧವಾರ, ನವೆಂಬರ್ 25, 2020
21 °C
ಹಲವು ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಜೆಡಿಯು ಹೋರಾಟ

ಬಿಹಾರ ವಿಧಾನಸಭಾ ಚುನಾವಣೆ: ನಿತೀಶ್‌ ಕಾಲ ಕೆಳಗಿನ ನೆಲ ಕುಸಿಯುತ್ತಿದೆಯೇ?

ಅಭಯ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರ ಚುನಾವಣೆಯ ಚಿತ್ರಣ ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಎರಡು ಘಟನೆಗಳನ್ನು ಗಮನಿಸಬಹುದು.

ನಿತೀಶ್‌ ಕುಮಾರ್‌ ಸಚಿವ ಸಂಪುಟದ ಹಿರಿಯ ಸದಸ್ಯ ಮಹೇಶ್ವರ್‌ ಹಜಾರಿ ಅವರು ಸಮಷ್ಠಿಪುರದ ತಮ್ಮ ಕ್ಷೇತ್ರ ಕಲ್ಯಾಣಪುರದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಜನರು ಅವರನ್ನು ತಡೆದು, ಧಿಕ್ಕಾರ ಕೂಗಿ ವಾಪಸ್‌ ಕಳುಹಿಸಿದ್ದರು. ‘ಸುಮ್ಮನೆ ವಾಪಸ್‌ ಹೋಗಿ, ಇಲ್ಲಿನ ರಸ್ತೆಗಳ ನಿರ್ಮಾಣ ಪೂರ್ಣಗೊಳ್ಳುವವರೆಗೆ ಮುಖ ತೋರಿಸಬೇಡಿ, ರಸ್ತೆ ಇಲ್ಲದಿದ್ದರೆ ಮತವೂ ಇಲ್ಲ’ ಎಂದು ಜನರು ಕೂಗಿದ್ದರು. ಜೆಡಿಯುನ ಹಿರಿಯ ಮುಖಂಡ ಹಜಾರಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ತಕ್ಷಣವೇ ವಾಪಸ್‌ ಹೋಗಬೇಕಾಗಿ ಬಂದಿತ್ತು.

ಎರಡನೆಯ ಪ್ರಕರಣ ಇನ್ನೂ ಹೆಚ್ಚು ಮುಜುಗರಕಾರಿಯಾಗಿತ್ತು. ಔರಂಗಾಬಾದ್‌ನಲ್ಲಿ ನಿತೀಶ್‌ ಅವರ ಭಾಷಣ ಕೇಳುತ್ತಿದ್ದ ಒಂದು ಗುಂಪು ಮುಖ್ಯಮಂತ್ರಿಯ ವಿರುದ್ಧವೇ ಘೋಷಣೆ ಕೂಗಿತು. ಅಸಭ್ಯ ಪದಗಳನ್ನು ಬಳಸಿತು. ಅವರಲ್ಲಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ‘ಆತನಿಗೆ ಹೊಡೆಯಬೇಡಿ, ಬಿಟ್ಟುಬಿಡಿ’ ಎಂದು ನಿತೀಶ್‌ ಪೊಲೀಸರಿಗೆ ಸೂಚಿಸಿದರು. 

ತಮ್ಮ ವಿರುದ್ಧ, ತಮ್ಮ ಆಳ್ವಿಕೆ ವಿರುದ್ಧ ಜನರಲ್ಲಿ ಅತೃಪ್ತಿ ಇದೆ ಎಂಬ ವಿಚಾರ ನಿತೀಶ್‌ ಅವರಿಗೆ ತಿಳಿದಿದೆ. ತಮಗೆ ಅನನುಕೂಲಕರ ಸನ್ನಿವೇಶ ನಿರ್ಮಾಣ ಆಗಿರುವುದಕ್ಕೆ ನಿತೀಶ್‌ ಅವರೇ ಹೊಣೆ.

ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು ನಿತೀಶ್‌ ಅವರ ಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ‘15 ವರ್ಷಗಳಲ್ಲಿ ತಾವು ಬಿಹಾರಕ್ಕೆ ಏನು ಮಾಡಿದ್ದೇವೆ ಎಂಬುದನ್ನು ಹೇಳುವ ಬದಲು ನಿತೀಶ್‌ ಅವರು ‘ಲಾಲು–ರಾಬ್ಡಿ ಜಂಗಲ್‌ ರಾಜ್’ ಬಗ್ಗೆಯೇ ಮಾತನಾಡುತ್ತಿದ್ದಾರೆ. ಲಾಲು ಪ್ರಸಾದ್ ಮತ್ತು ರಾಬ್ಡಿ ದೇವಿ ಅವರು ಅಷ್ಟೊಂದು ಕೆಟ್ಟವರಾಗಿದ್ದರೆ ಅವರ ಜತೆಗೆ 2015ರಲ್ಲಿ ನಿತೀಶ್‌ ಸೇರಿದ್ದು ಏಕೆ’ ಎಂಬ ಪ್ರಶ್ನೆ ಮತದಾರರಲ್ಲಿ ಇದೆ. ಅವರಿಬ್ಬರ ಆಡಳಿತದ ಬಗ್ಗೆ ನಿತೀಶ್‌ಗೆ ಆಗ ಅರಿವಿರಲಿಲ್ಲವೇ? ಪ್ರತಿ ಮಕರ ಸಂಕ್ರಾಂತಿಗೂ ರಾಬ್ಡಿ ಅವರನ್ನು ಭೇಟಿಯಾಗಿ, ಅವರಿಂದ ಹಣೆಗೆ ತಿಲಕ ಇರಿಸಿಕೊಳ್ಳುವುದು ಏಕೆ? ಈಗ, ಅವರು ‘ಪತಿ–ಪತ್ನಿ ಆಳ್ವಿಕೆ’ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಿತೀಶ್‌ ಅವರ ಅವಕಾಶವಾದವನ್ನು ತೋರಿಸುತ್ತದೆ’. ‌

ಮಾರ್ಚ್‌ ಕೊನೆಯಲ್ಲಿ ಲಕ್ಷಾಂತರ ವಲಸಿಗರು ಬಿಹಾರಕ್ಕೆ ಹಿಂದಿರುಗಲು ಆರಂಭಿಸಿದ ಸಂದರ್ಭದಲ್ಲಿಯೇ ನಿತೀಶ್‌ ವಿರುದ್ಧ ಆಕ್ರೋಶ ಆರಂಭವಾಗಿತ್ತು. ವಲಸಿಗರು ಹಿಂದಿರುಗಬಾರದು, ಅವರು ಬಂದು ಕೊರೊನಾ ಸೋಂಕು ಹರಡುತ್ತಾರೆ, ಕೋವಿಡ್‌ ಲಾಕ್‌ಡೌನ್‌ನ ಉದ್ದೇಶವೇ ವಿಫಲವಾಗುತ್ತದೆ ಎಂದು ನಿತೀಶ್‌ ಹೇಳಿದ್ದರು.

ಬಿಹಾರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಸರ್ಕಾರ ಏಕೆ ನೆರವಾಗಿಲ್ಲ ಎಂಬ ಪ್ರಶ್ನೆಗೆ, ರಾಜ್ಯವು ಎಲ್ಲ ಕಡೆಯಿಂದಲೂ ಭೂಮಿಯಿಂದ ಆವೃತವಾಗಿದೆ, ಈ ರಾಜ್ಯಕ್ಕೆ ಕರಾವಳಿ ಇಲ್ಲ. ಹಾಗಾಗಿ, ಕೈಗಾರಿಕೆ ಸ್ಥಾಪಿಸಲು ಆಗಿಲ್ಲ ಎಂದು ನಿತೀಶ್‌ ಉತ್ತರಿಸಿದ್ದರು.

ಪರಿಸ್ಥಿತಿ ನಿತೀಶ್‌ ಪರವಾಗಿಲ್ಲ ಎಂದು ಹೇಳುವುದಕ್ಕೆ ಇನ್ನೊಂದು ಕಾರಣ ದೃಢ ಮತ್ತು ಗೆಲ್ಲುವ ಸಾಮರ್ಥ್ಯದ ಮೈತ್ರಿಕೂಟ ರೂ‍ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗದೇ ಇರುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಶೇ 6ರಷ್ಟು ಮತ ಹೊಂದಿರುವ ಎಲ್‌ಜೆಪಿಯನ್ನು ದೂರ ಮಾಡಿದ್ದು ಪ್ರಮಾದ. ಇದರಿಂದ ಜೆಡಿಯುಗೆ ದೊಡ್ಡ ನಷ್ಟವೇ ಆಗಲಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಎಲ್‌ಜೆಪಿ ಗೆಲ್ಲದೇ ಇರಬಹುದು. ಆದರೆ, ಜೆಡಿಯು ಗೆಲ್ಲುವ ಸಾಧ್ಯತೆಯನ್ನು ಕುಗ್ಗಿಸುವುದರಲ್ಲಿ ಅನುಮಾನ ಇಲ್ಲ ಎಂದು ಹಿರಿಯ ಪತ್ರಕರ್ತ ಅಶೋಕ್‌ ಮಿಶ್ರಾ ಹೇಳುತ್ತಾರೆ. 

ಜೆಡಿಯು ಕೆಳಗಿನ ನೆಲ ಕುಸಿಯುತ್ತಿದೆ ಎಂಬುದು ಅರಿವಾಗಿದೆ. ಎಲ್‌ಜೆಪಿಯಿಂದಾಗಿ ಬಿಜೆಪಿ ನೆಲೆ ಇನ್ನಷ್ಟು ಗಟ್ಟಿಯಾಗಿದೆ. ಹಾಗಾಗಿಯೇ ‘ಯಾರು ಎಷ್ಟು ಕ್ಷೇತ್ರಗಳನ್ನಾದರೂ ಗೆಲ್ಲಲಿ, ಮುಂದಿನ ಮುಖ್ಯಮಂತ್ರಿ ನಿತೀಶ್‌ ಅವರೇ’ ಎಂದು ಬಿಜೆಪಿ ಹತ್ತಾರು ಬಾರಿ ಹೇಳಿದೆ.

ಬಿಜೆಪಿಯ ಈ ಭರವಸೆಯನ್ನು ಪೂರ್ಣವಾಗಿ ನಂಬುವುದು ಮೂರ್ಖತನವಾದೀತು ಎಂಬುದು ನಿತೀಶ್‌ ಅವರಿಗೆ ಅರಿವಿಲ್ಲದ ವಿಷಯವೇನಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು