ಗುರುವಾರ , ಅಕ್ಟೋಬರ್ 1, 2020
27 °C
ಆ.13ರೊಳಗೆ ಲಿಖಿತ ಪ್ರತಿಕ್ರಿಯೆ ನೀಡಲು ಸೂಚನೆ

ಸುಶಾಂತ್‌ ಅಸಹಜ ಸಾವು ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ತೀರ್ಪು ಕಾಯ್ದಿರಿಸಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಬಿಹಾರ ಸರ್ಕಾರಗಳು ಹಾಗೂ ಸುಶಾಂತ್‌ ಸಿಂಗ್‌ ಅವರ ತಂದೆ ಕೃಷ್ಣ ಕಿಶೋರ್‌ ಸಿಂಗ್‌ ಅವರು ಆಗಸ್ಟ್‌ 13ರೊಳಗಾಗಿ ಎರಡು ಪುಟಕ್ಕೆ ಮೀರದಂತೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಹೃಷಿಕೇಷ್‌ ರಾಯ್‌ ಅವರಿದ್ದ ನ್ಯಾಯಪೀಠವು ಸೂಚಿಸಿತು. 

ಬಿಹಾರ ಪೊಲೀಸ್‌ ವ್ಯಾಪ್ತಿಗೆ ಬರಲ್ಲ: ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣವು ಬಿಹಾರ ಪೊಲೀಸರ ತನಿಖಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ‘ಪಟ್ನಾದಲ್ಲಿ ದಾಖಲಾಗಿರುವ ದೂರು ಕಾನೂನುಬಾಹಿರವಾಗಿಲ್ಲ. ಮಹಾರಾಷ್ಟ್ರದಿಂದ ಈ ಪ್ರಕರಣದ ತನಿಖೆಗೆ ಯಾವುದೇ ಸಹಕಾರ ದೊರೆಯುತ್ತಿಲ್ಲ’ ಎಂದು ಬಿಹಾರ ಆರೋಪಿಸಿದೆ. ಇದೇ ವೇಳೆ ಮುಂಬೈ ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಕೃಷ್ಣ ಕಿಶೋರ್‌ ಸಿಂಗ್ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. 

ಬೆಲ್ಟ್‌ ಗುರುತು: ವಿಚಾರಣೆ ಸಂದರ್ಭದಲ್ಲಿ ಕೃಷ್ಣ ಕಿಶೋರ್‌ ಸಿಂಗ್‌ ಪರ ವಕೀಲ ವಿಕಾಸ್‌ ಸಿಂಗ್‌, ‘ಮುಂಬೈ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿಲ್ಲ. ಸುಶಾಂತ್‌ ಕುತ್ತಿಗೆಯಲ್ಲಿ ಇದ್ದ ಗುರುತು ನೇಣು ಹಾಕಿಕೊಂಡಂತೆ ಇರಲಿಲ್ಲ, ಬದಲಾಗಿ ಬೆಲ್ಟ್‌ನ ಗುರುತಿನಂತೆ ಇತ್ತು. ಕುಟುಂಬದವರೂ, ಸುಶಾಂತ್‌ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ನೋಡಿಲ್ಲ ಬದಲಾಗಿ ಬೆಡ್‌ ಮೇಲೆ ಮೃತದೇಹ ಇರುವುದನ್ನು ನೋಡಿದ್ದಾರೆ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.