ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ರಾಜಕೀಯ: ಹೊಸ ಸರ್ಕಾರ ರಚನೆಯಾದರೆ ನಿತೀಶ್ ಕುಮಾರ್‌ಗೇ ಸಿಎಂ ಹುದ್ದೆ

Last Updated 9 ಆಗಸ್ಟ್ 2022, 10:35 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಮಂಗಳವಾರ ತೀವ್ರಗೊಂಡಿವೆ. ಆಡಳಿತಾರೂಢ ಜೆಡಿ(ಯು) ಪಕ್ಷವು ಬಿಜೆಪಿ ಜತೆಗಿನ ಮೈತ್ರಿ ಕೊನೆಗೊಳಿಸಿ ಆರ್‌ಜೆಡಿ ಹಾಗೂ ಇತರ ಪ್ರತಿಪಕ್ಷಗಳ ಜತೆ ಕೈಜೋಡಿಸಿದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಿ 45 ಶಾಸಕರ ಬಲವಿದೆ. ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿದ್ದು 79 ಶಾಸಕರನ್ನು ಹೊಂದಿದೆ. ಆದಾಗ್ಯೂ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ಆರ್‌ಜೆಡಿ ಬೆಂಬಲ ಸೂಚಿಸಲಿದೆಯೇ?

ಸಂಖ್ಯಾಬಲದ ಹೊರತಾಗಿಯೂ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಜೆಡಿ(ಯು) ಮೂಲಗಳು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿವೆ.

‘ಹೊಸ ಸರ್ಕಾರ ರಚನೆಯಾದರೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಬಹುಶಃ ಒಂದೆರಡು ದಿನಗಳಲ್ಲಿ ಈ ವಿದ್ಯಮಾನ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.

‘ನಿತೀಶ್ ಮಣಿಸಲು ಬಿಜೆಪಿ ಯತ್ನ’

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿ ಅವರನ್ನು ಸಮಾಧಾನಪಡಿಸಲು ಕೊನೆಯದಾಗಿ ಯತ್ನಿಸಿದ್ದರು. ಆ ಬಳಿಕ ರಾಜಕೀಯ ಬೆಳವಣಿಗೆಗಳು ನಡೆದಿವೆ. ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ಅಸಮಾಧಾನ ತಣಿಸುವಲ್ಲಿ ಶಾ ಅವರ ಮಾತುಕತೆ ಹೆಚ್ಚಿನ ಪ್ರಭಾವ ಬೀರಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ರಾಜ್ಯ ರಾಜಕೀಯ ವಿದ್ಯಮಾನಗಳು, ಜೆಡಿ(ಯು), ಆರ್‌ಜೆಡಿ, ಕಾಂಗ್ರೆಸ್ ಮರು ಮೈತ್ರಿಗೆ ಸಂಬಂಧಿಸಿ ಯಾವುದೇ ರೀತಿಯ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಪಕ್ಷದ ಶಾಸಕರು, ವಕ್ತಾರರು ಹಾಗೂ ಇತರ ನಾಯಕರಿಗೆ ಆರ್‌ಜೆಡಿ ಸೂಚಿಸಿದೆ.

ಜೆಡಿ(ಯು) ಪಕ್ಷಕ್ಕೆ ಆರ್‌.ಸಿ.ಪಿ. ಸಿಂಗ್‌ ರಾಜೀನಾಮೆ ಸಲ್ಲಿಸಿದ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಾಗಿದ್ದವು. ನಿತೀಶ್ ಕುಮಾರ್ ಅವರು ಭಾನುವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡರೆ ಅವರ ಜೆಡಿ(ಯು) ಪಕ್ಷವನ್ನು ಅಪ್ಪಿಕೊಳ್ಳಲು ಸಿದ್ಧ ಎಂದು ಪ್ರತಿಪಕ್ಷ ಆರ್‌ಜೆಡಿ ಸೋಮವಾರ ಬಹಿರಂಗವಾಗಿ ಘೋಷಣೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT