ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಜೆಡಿ ಪ್ರಣಾಳಿಕೆ ಬಿಡುಗಡೆ: ಕೃಷಿ, ಕೈಗಾರಿಕೆ, ಶಿಕ್ಷಣಕ್ಕೆ ಆದ್ಯತೆ

ಕೃಷಿ ಸಾಲಮನ್ನಾ, 10 ಲಕ್ಷ ಉದ್ಯೋಗ
Last Updated 24 ಅಕ್ಟೋಬರ್ 2020, 18:24 IST
ಅಕ್ಷರ ಗಾತ್ರ

ಪಟ್ನಾ: ಮಹಾಮೈತ್ರಿಕೂಟದ ನೇತೃತ್ವ ವಹಿಸಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷವು ಬಿಹಾರ ಚುನಾವಣೆಯ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. 10 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಕೃಷಿ ಸಾಲ ಮನ್ನಾ ಮಾಡುವ ಭರವಸೆಯನ್ನು ನೀಡಿದೆ.ಕೃಷಿ, ಕೈಗಾರಿಕೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದೆ.

ಪಕ್ಷದ ನಾಯಕ ತೇಜಸ್ವಿ ಯಾದವ್ ಬಿಡುಗಡೆ ಮಾಡಿದ ಪ್ರಣಾಳಿಕೆಯ ಮುಖಪುಟದಲ್ಲಿ ಗಾಂಧೀಜಿ, ಅಂಬೇಡ್ಕರ್, ಮೌಲಾನಾ ಅಬುಲ್‌ ಕಲಾಂ ಆಜಾದ್, ರಾಮ್ ಮನೋಹರ್ ಲೋಹಿಯಾ ಮೊದಲಾದವರ ಚಿತ್ರಗಳಿವೆ. ಆದರೆ ಪಕ್ಷದ ಸ್ಥಾಪಕ ಹಾಗೂ ವರ್ಚಸ್ವಿ ನಾಯಕ ಲಾಲು ಪ್ರ‌ಸಾದ್ ಅವರ ಚಿತ್ರ ಇಲ್ಲ.

ಈ ಹಿಂದೆ ತಮ್ಮ ಪಕ್ಷದ ಸರ್ಕಾರವು ದೀನ ದಲಿತರಿಗೆ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ಹೇಗೆ ಹೋರಾಡಿತು ಮತ್ತು ಬಿಹಾರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮರಳಿ ತಂದಿತು ಎಂಬ ಬಗ್ಗೆ ಲಾಲು ಪ್ರಸಾದ್ ಬರೆದ ಬರಹವನ್ನು ಪ್ರಣಾಳಿಕೆ ಒಳಗೊಂಡಿದೆ.

ಬಹುಕೋಟಿ ಮೊತ್ತದ ಮೇವು ಹಗರಣದಲ್ಲಿ ಜೈಲಿನಲ್ಲಿರುವ ಲಾಲು, ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನರಿಗೆ ಉದ್ಯೋಗ ಇಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳವಾಗಿದೆ, ರೈತರ ಮೊಗದಲ್ಲಿ ನಗು ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಉದ್ಯೋಗ ಸೃಷ್ಟಿ ಜಟಾಪಟಿ:10 ಲಕ್ಷ ಉದ್ಯೋಗ ಸೃಷ್ಟಿಸುವ ಮಹಾಮೈತ್ರಿಕೂಟದ ಭರವಸೆಯನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಟೀಕಿಸಿದ್ದರು. ‘ಹೊಸ ನೌಕರರಿಗೆ ವೇತನ ನೀಡಲು ಖೋಟಾ ನೋಟು ಮುದ್ರಿ ಸುತ್ತೀರಾ‘ ಎಂದು ಪ್ರಶ್ನಿಸಿದ್ದರು. ಆದರೆ ‘19 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಬಗ್ಗೆ ನಿತೀಶ್ ಏನು ಹೇಳುತ್ತಾರೆ’ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ. ಬಿಜೆಪಿ ಭರವಸೆಯನ್ನು ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಕೇಳಿದ್ದಾರೆ.

ಹಣಕಾಸಿನ ಸಂಪನ್ಮೂಲ ಕ್ರೋಡೀಕರಣ ಪ್ರಶ್ನಿಸಿದ್ದ ನಿತೀಶ್‌ಗೆ ಆರ್‌ಜೆಡಿ ಉತ್ತರಿಸಿದೆ. ‘ಬಿಹಾರದ ಬಜೆಟ್ ಗಾತ್ರ ₹2.5 ಲಕ್ಷ ಕೋಟಿ. ಈ ಪೈಕಿ ನಿತೀಶ್ ಖರ್ಚು ಮಾಡುವುದು ಶೇ 60ರಷ್ಟು ಮಾತ್ರ. ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ,ಉಳಿದ ₹80,000 ಕೋಟಿಯನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಿದೆ’ ಎಂದು ವಕ್ತಾರ ಮನೋಜ್ ಝಾ ತಿಳಿಸಿದ್ದಾರೆ.

ಪ್ರಣಾಳಿಕೆ ಪ್ರಮುಖಾಂಶ

*2020ರವರೆಗೆ ರೈತರು ಪಡೆದ ಕೃಷಿ ಸಾಲ ಮನ್ನಾ

*ಕನಿಷ್ಠ ಬೆಂಬಲ ಬೆಲೆ ನೀಡಿರೈತರಿಂದ ಧಾನ್ಯ ಖರೀದಿ

*ಕೃಷಿಕರ ಆದಾಯ ಹೆಚ್ಚಳಕ್ಕೆ ಕ್ರಮ

*ಖಾಲಿ ಇರುವ ಶಿಕ್ಷಕರ ಹುದ್ದೆ ಸಮೋರೋಪಾದಿಯಲ್ಲಿ ಭರ್ತಿ

*ಬಜೆಟ್‌ನ ಶೇ 22ರಷ್ಟು ಪಾಲು ಶಿಕ್ಷಣ ಕ್ಷೇತ್ರಕ್ಕೆ ಮೀಸಲು

*ಕಾರ್ಮಿಕರ ವಲಸೆ ತಡೆಯಲು ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಹೂಡಿಕೆಗೆ ಪ್ರೋತ್ಸಾಹ

*‍ಪ್ರತೀ ಪಂಚಾಯತ್ ಮಟ್ಟದಲ್ಲಿ ಎಲ್ಲ ನಾಗರಿಕರಿಗೂ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ

*ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ

ಚಿರಾಗ್ ವಿರುದ್ಧ ಚಕಾರವೆತ್ತದ ನಿತೀಶ್

ಎಲ್‌ಜೆಪಿ ಸ್ಥಾಪಕ ದಿ. ರಾಮ್‌ವಿಲಾಸ್ ಪಾಸ್ವಾನ್ ಅವರ ತವರು ಖಗಾರಿಯಾ ಜಿಲ್ಲೆಯ ಅಲೌಲಿ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಬಗ್ಗೆ ಚಕಾರ ಎತ್ತಲಿಲ್ಲ. ಚಿರಾಗ್ ಪರವಾಗಲೀ, ವಿರೋಧವಾಲೀ ನಿತೀಶ್ ಏನನ್ನೂ ಹೇಳದೇ ಪ್ರಚಾರ ಸಭೆಯನ್ನು ಮುಗಿಸಿದರು.

ಚಿರಾಗ್ ಅವರು ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಬಳಿಕ ನಿತೀಶ್ ವಿರುದ್ಧ ತೀವ್ರತರವಾದ ವಾಗ್ದಾಳಿ ನಡೆಸುತ್ತಿದ್ದಾರೆ. ಸಭೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಚಿರಾಗ್ ಬಗ್ಗೆ ನೇರವಾಗಿ ನಿತೀಶ್ ಏನೂ ಮಾತನಾಡುತ್ತಿಲ್ಲ. ಶನಿವಾರ ಸಭೆಯಲ್ಲಿ ಅವರ ಹೆಸರನ್ನೇ ಪ್ರಸ್ತಾಪಿಸಲಿಲ್ಲ.

ಪಾಸ್ವಾನ್ ಅವರು ತಮ್ಮ ರಾಜಕೀಯ ಜೀವನವನ್ನು 1969ರಲ್ಲಿ ಈ ಕ್ಷೇತ್ರದಿಂದ ಆರಂಭಿಸಿದ್ದರು.

ಮತ ಎಣಿಕೆ ದಿನ ಲಾಲು ಬಿಡುಗಡೆ?

ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಮುಂದಿನ ತಿಂಗಳು ಜಾಮೀನು ದೊರೆಯುವ ಸಾಧ್ಯತೆ ಇದೆ ಎಂದು ಅವರ ವಕೀಲರು ಹೇಳಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸಬೇಕಿದ್ದರೆ ಶಿಕ್ಷೆಯ ಅರ್ಧ ಭಾಗ ಪೂರ್ಣಗೊಂಡಿರಬೇಕು ಎಂದು ಕಾನೂನು ಪರಿಣತರು ಹೇಳಿದ್ದಾರೆ.

‘ದೇವಗಡ ಮತ್ತು ಚಾಯಿಬಾಸಾ ಪ್ರಕರಣಗಳಲ್ಲಿ ಲಾಲು ಅವರಿಗೆ ಈಗಾಗಲೇ ಜಾಮೀನು ದೊರೆತಿದೆ. ಈ ಪ್ರಕರಣಗಳಲ್ಲಿ ಅವರಿಗೆ ವಿಧಿಸಲಾದ ಶಿಕ್ಷೆಯ ಅರ್ಧ ಭಾಗ ಈಗಾಗಲೇ ಪೂರ್ಣಗೊಂಡಿದೆ. ದುಮ್ಕಾ ಪ್ರಕರಣದಲ್ಲಿ ವಿಧಿಸಲಾದ ಶಿಕ್ಷೆಯ ಅರ್ಧ ಭಾಗ ನವೆಂಬರ್‌ 9ಕ್ಕೆ ಪೂರ್ಣಗೊಳ್ಳುತ್ತದೆ’ ಎಂದು ಲಾಲು ಅವರ ವಕೀಲ ಪ್ರಭಾತ್‌ ಕುಮಾರ್‌ ತಿಳಿಸಿದ್ದಾರೆ.

ದುರ್ಗಾ ಪೂಜೆ ರಜೆಯ ಬಳಿಕ ಲಾಲು ಪರ ವಕೀಲರು ಜಾಮೀನಿಗಾಗಿ ಜಾರ್ಖಂಡ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಅವರ ಬಿಡುಗಡೆ ಸಾಧ್ಯತೆ ಇಲ್ಲ. ಅರ್ಧಭಾಗದಷ್ಟು ಶಿಕ್ಷೆ ನ.9ಕ್ಕೆ ಪೂರ್ಣಗೊಳ್ಳುವುದರಿಂದ 10ರಂದು ಅವರು ಬಿಡುಗಡೆ ಆಗಬಹುದು ಎಂದು ವಕೀಲರು ಹೇಳಿದ್ದಾರೆ. ವಿಶೇಷ ಎಂದರೆ, ಅಂದೇ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ನವೆಂಬರ್‌ 9ರಂದು ಲಾಲು ಅವರಿಗೆ ಜಾಮೀನು ದೊರೆಯಲಿದೆ. 10ರಂದು ನಿತೀಶ್‌ ಅವರಿಗೆ ವಿದಾಯ ಹೇಳಲಾಗುವುದು ಎಂದು ಲಾಲು ಅವರ ಮಗ ತೇಜಸ್ವಿ ಯಾದವ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT