ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ ಕೋವಿಡ್ ರೋಗಿಗಳ ಭರವಸೆಯ ಕಿರಣ ಈ 'ಆಕ್ಸಿಜನ್ ಮ್ಯಾನ್'

Last Updated 23 ಏಪ್ರಿಲ್ 2021, 16:16 IST
ಅಕ್ಷರ ಗಾತ್ರ

ಪಟ್ನಾ: ದೇಶದಲ್ಲಿ ಕೋವಿಡ್‌ 2ನೇ ಅಲೆಯ ಪರಿಣಾಮ ಸಾವಿರಾರು ಜನರು ಪ್ರಾಣವಾಯು(ಆಮ್ಲಜನಕ) ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬಿಹಾರದ ವ್ಯಕ್ತಿಯೊಬ್ಬರು ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡಿ ಸಾವಿರಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾರೆ.

ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡುತ್ತಿರುವ ಇಲ್ಲಿನ ನಿವಾಸಿ ಗೌರವ್‌ ರಾಯ್‌ ನಿಜವಾದ ಹಿರೋ ಆಗಿದ್ದಾರೆ. ಅವರ ಸೇವೆಗೆ ಸಾಮಾಜಿಕ ಮಾಧ್ಯಮಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರ ನಿಜವಾದ ಹೆಸರು ಎಷ್ಟೋ ಜನಕ್ಕೆ ತಿಳಿದಿಲ್ಲ, ಆದರೆ ’ಆಕ್ಸಿಜನ್‌ ಮ್ಯಾನ್‌’ ಎಂದರೇ ಅವರನ್ನು ಎಲ್ಲರೂ ಗುರುತಿಸುತ್ತಾರೆ.

ದೇಶದಲ್ಲಿ ಸಾವಿರಾರು ಸೋಂಕಿತರು ಉಸಿರಾಟದ ತೊಂದರೆ ಹಾಗೂ ಆಕ್ಸಿಜನ್‌ ಕೊರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಪತ್ರೆಗಳಿಗೆ ದಾಖಲಾಗದೇ ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿರುವವರು ಆಮ್ಲಜನಕ ಕೊರತೆಯಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಳೆದೊಂದು ವಾರದಿಂದ ಪಟ್ನಾದಲ್ಲಿ ಸಾವಿರಕ್ಕೂ ಹೆಚ್ಚು ಜನರು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿರುವ ಬೆನ್ನಲೇ ಗೌರವ್ ಪ್ರತ್ಯೇಕ ವಾಸದಲ್ಲಿ ಇರುವವರಿಗೆ ಉಚಿತವಾಗಿ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಪೂರೈಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದೊಂದು ವರ್ಷದಿಂದ ಅವರು ಈ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.

ಪಟ್ನಾ ಸೇರಿದಂತೆ ಬಿಹಾರದ ಇತರ ಭಾಗಗಳಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಉಚಿತವಾಗಿ ಒದಗಿಸುವ ಮೂಲಕ 1,100 ಕ್ಕೂ ಹೆಚ್ಚು ಸೋಂಕಿತರ ಪ್ರಾಣ ಕಾಪಾಡಿದ್ದಾರೆ. ಅದಕ್ಕಾಗಿಯೇ ಗೌರವ್‌ ಅವರನ್ನು ಜನರು ‘ಆಕ್ಸಿಜನ್‌ ಮ್ಯಾನ್‌’ ಎಂದೇ ಕರೆಯುತ್ತಾರೆ.

ಬೆಡ್‌ಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ಆಸ್ಪತ್ರೆಗಳು ಕೋವಿಡ್ರೋಗಿಗಳನ್ನು ದೂರವಿಡುತ್ತಿರುವ ಇಂತಹ ಸಮಯದಲ್ಲಿ ಗೌರವ್‌ ದೇವರಾಗಿ ಬಂದಿದ್ದಾರೆ ಎಂದು ಸಹಾಯ ಪಡೆದ ರೋಗಿಗಳು ಹೇಳುತ್ತಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗೌರವ್‌ ಮತ್ತು ಅವರ ಪತ್ನಿ ಅರುಣಾ ಭಾರದ್ವಾಜ್ ತಲಾ 10 ಕೆಜಿಯ 250ಕ್ಕೂ ಹೆಚ್ಚು ಸಿಲಿಂಡರ್ಗಳೊಂದಿಗೆ 'ಆಕ್ಸಿಜನ್ ಬ್ಯಾಂಕ್' ನಿರ್ವಹಣೆ ಮಾಡುತ್ತಿದ್ದಾರೆ.

‌‘ಕಳೆದ ವರ್ಷ ಜುಲೈನಲ್ಲಿ ನನಗೆ ಕೋವಿಡ್‌ ಸೋಂಕು ತಗುಲಿತ್ತು. ಸೋಂಕು ಉಲ್ಬಣಗೊಂಡಿದ್ದರಿಂದ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ನನ್ನನ್ನು ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಲಾಗಿತ್ತು. ಅಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂತು. ಆಮ್ಲಜನಕ ಇಲ್ಲದೇ ಕೆಲವರು ಮೃತಪಟ್ಟಿದನ್ನು ನಾನು ಕಣ್ಣಾರೆ ಕಂಡೆ. ಇದನ್ನು ನನ್ನ ಪತ್ನಿಗೂ ವಿವರಿಸಿ ಹೇಳಿದ್ದೆ’.

‘ನಾನು ಬದುಕುಳಿದರೆ ಮಾನವ ಕಲ್ಯಾಣಕ್ಕಾಗಿ ಏನಾದರೂ ಮಾಡುತ್ತೇನೆ ಎಂದು ದೇವರಲ್ಲಿ ಬೇಡಿಕೊಂಡೆ. ಕೆಲವೇ ದಿನಗಳಲ್ಲಿ ಗುಣಮುಖನಾದೆ. ಸರ್ವಶಕ್ತನಾದ ದೇವರು ನನ್ನ ಮೇಲೆ ಕೃಪೆ ತೋರಿ ಈ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾನೆ’ ಎಂದು ಗೌರವ್‌ ಹೇಳುತ್ತಾರೆ.

ಸಂಪೂರ್ಣವಾಗಿ ಗುಣಮುಖನಾದ ಬಳಿಕ, ಜುಲೈ ತಿಂಗಳ ಅಂತ್ಯದಲ್ಲಿ ನನ್ನ ಉಳಿತಾಯದ ಹಣದ ಜೊತೆಗೆ ಪತ್ನಿ ಹಾಗೂ ಆಪ್ತ ಸ್ನೇಹಿತರು ನೀಡಿದ ಹಣದಿಂದ ಮೂರು ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿ ಈ ಸಾಮಾಜಿಕ ಕೆಲಸವನ್ನು ಆರಂಭಿಸಿದೆ. ನಂತರ ದಾನಿಗಳಸಹಕಾರದಿಂದ ಸಿಲಿಂಡರ್‌ಗಳನ್ನು 55ಕ್ಕೆ ಹೆಚ್ಚಿಸಿಕೊಂಡೆ ಎಂದು ಗೌರವ್‌ ಹೇಳುತ್ತಾರೆ.

ನನ್ನ ಕೆಲಸವನ್ನು ಮೆಚ್ಚಿದ ಬಿಹಾರ ಪೌಂಡೇಷನ್‌ 200 ಸಿಲಿಂಡರ್‌ಗಳನ್ನು ನೀಡಿದೆ. ಸದ್ಯ ಆಮ್ಲಜನಕ ಕೊರತೆ ಇರುವವವರಿಗೆ ನಮ್ಮ ಕಾರಿನಲ್ಲಿ ಉಚಿತವಾಗಿ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತದೆ. ಇದಕ್ಕಾಗಿ ನನ್ನ ಸಂಬಂಳದಿಂದ ₹ 20 ಸಾವಿರವನ್ನು ಪ್ರತಿ ತಿಂಗಳು ತೆಗೆದಿಡುತ್ತೇನೆ. ನನ್ನ ಪತ್ನಿಯೂ ದುಡಿಮೆಯ ಒಂದು ಪಾಲನ್ನು ನೀಡುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 5ಗಂಟೆಗೆ ಆಮ್ಲಜನಕ ಸಿಲಿಂಡರ್‌ ಸರಬರಾಜು ಮಾಡುವ ಕಾರ್ಯ ಆರಂಭವಾಗುತ್ತದೆ ಎಂದು ಗೌರವ್‌ ಮಾಧ್ಯಮಗಳ ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT