ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಕಿಸ್‌ ಬಾನು ಸಲ್ಲಿಸಿದ್ದ ಅರ್ಜಿ ವಜಾ

ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶ ಮರುಪರಿಶೀಲನೆಗೆ ಕೋರಿಕೆ
Last Updated 17 ಡಿಸೆಂಬರ್ 2022, 20:33 IST
ಅಕ್ಷರ ಗಾತ್ರ

ನವದೆಹಲಿ: ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಯೊಬ್ಬ ಶಿಕ್ಷೆಯನ್ನು ಕಡಿಮೆ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಎಂದು ಗುಜರಾತ್ ಸರ್ಕಾರಕ್ಕೆ ನೀಡಿದ್ದ ಆದೇಶವನ್ನು ಮರುಪರಿಶೀಲಿಸಿ ಎಂದು ಬಿಲ್ಕಿಸ್‌ ಬಾನು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶನಿವಾರ ತಳ್ಳಿ ಹಾಕಿದೆ.

2002ರ ಗುಜರಾತ್‌ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್‌ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಮತ್ತು ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು.

ಮರುಪರಿಶೀಲನೆಗೆ ಕೋರಲಾದ ತೀರ್ಪನ್ನು ನೀಡಿದ್ದ ನ್ಯಾಯಮೂರ್ತಿಗಳು ಅರ್ಜಿಯನ್ನು ಪರಿಶೀಲನೆಗೆ ಒಳಪಡಿಸಬೇಕು ಮತ್ತು ನ್ಯಾಯಮೂರ್ತಿಗಳ ಕೊಠಡಿಯಲ್ಲಿಯೇ ತೀರ್ಮಾನವನ್ನೂ ಕೈಗೊಳ್ಳಬೇಕು ಎಂಬುದು ನಿಯಮ. ಬಿಲ್ಕಿಸ್‌ ಅವರ ಅರ್ಜಿ ಕೂಡ ಡಿ.13ರಂದು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ವಿಕ್ರಮ್‌ ನಾಥ್‌ ಅವರ ಪೀಠದ ಮುಂದೆ ಬಂದಿತ್ತು.

‘ಮೇಲೆ ಹೇಳಿದ ಮರುಪರಿಶೀಲನೆ ಅರ್ಜಿಯನ್ನು 2022ರ ಡಿ. 13ರಂದು ವಜಾ ಮಾಡಲಾಗಿದೆ ಎಂದು ನಿಮಗೆ ತಿಳಿಸುವಂತೆ ನನಗೆ ನಿರ್ದೇಶನ ಬಂದಿದೆ’ ಎಂದು ಸುಪ್ರೀಂ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್‌ ಅವರು ಬಿಲ್ಕಿಸ್‌ ಅವರ ವಕೀಲೆ ಶೋಭಾ ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಪರಾಧಿಗಳಲ್ಲಿ ಒಬ್ಬ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್‌ ಮೇ 13ರಂದು ನೀಡಿದ್ದ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಬಿಲ್ಕಿಸ್‌ ಕೇಳಿಕೊಂಡಿದ್ದರು. ಅಪರಾಧಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಬೇಕು ಎಂದು ಅಪರಾಧಿಗಳಲ್ಲಿ ಒಬ್ಬ ಅರ್ಜಿ ಸಲ್ಲಿಸಿದ್ದ. ಅದನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಹಾಗಾಗಿ, ಎಲ್ಲ 11 ಅರಪ‍ರಾಧಿ
ಗಳನ್ನು ಆಗಸ್ಟ್‌ 15ರಂದು ಗುಜರಾತ್ ಸರ್ಕಾರವು ಬಿಡುಗಡೆ ಮಾಡಿತ್ತು.

ಆದೇಶವನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಇನ್ನೂ ಪ್ರಕಟಿಸಿಲ್ಲ. ಆದೇಶ ಪ್ರಕಟವಾದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶೋಭಾ ಅವರು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ನಡೆದಾಗ ಬಿಲ್ಕಿಸ್‌ ಅವರಿಗೆ 21 ವರ್ಷ ವಯಸ್ಸಾಗಿತ್ತು. ಆಗ ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಹತ್ಯೆಯಾದ ಏಳು ಮಂದಿಯಲ್ಲಿ ಬಿಲ್ಕಿಸ್‌ ಅವರ ಮೂರು ವರ್ಷದ ಮಗಳೂ ಸೇರಿದ್ದಾಳೆ.

ಅಪರಾಧಿ ಸಲ್ಲಿಸಿದ್ದ ಅರ್ಜಿಯಲ್ಲಿ ಬಿಲ್ಕಿಸ್ ಅವರನ್ನು ಪ್ರತಿವಾದಿ ಮಾಡಿಲ್ಲ. ಈ ಅಪರಾಧಿ ಮತ್ತು ಇತರ 10 ಮಂದಿ ಅಪರಾಧಿಗಳನ್ನು ಈಗ ಜಾರಿಯಲ್ಲಿ ಇಲ್ಲದ ನೀತಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಬಿಲ್ಕಿಸ್‌ ಅವರ ಪರ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ವಾದಿಸಲಾಗಿದೆ.

‘1992ರ ಜುಲೈ 9ರಂದು ರೂಪಿಸಿದ್ದ ನೀತಿಯನ್ನು ಸರ್ಕಾರವು 2003ರಲ್ಲಿ ಸುತ್ತೋಲೆ ಹೊರಡಿಸಿ ರದ್ದುಪಡಿಸಿದೆ. ಹಾಗಾಗಿ, 1992ರ ನೀತಿಯು ಈಗಲೂ ಜಾರಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲನೆಗೆ ಒಳಪಡಿಸಬೇಕಿದೆ’ ಎಂದೂ ಅರ್ಜಿ ಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT