ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿಗೆ 46 ವರ್ಷ: ಆಡಳಿತ– ವಿಪಕ್ಷಗಳ ನಡುವೆ ಕೆಸರೆರಚಾಟ

ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 46 ವರ್ಷ ಕಳೆದಿದ್ದು, ಈ ವಿಚಾರವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರಸ್ಪರ ಟೀಕಾ ಪ್ರಹಾರಕ್ಕೆ ಎಡೆಮಾಡಿದೆ. ಅವು ಎಂದಿಗೂ ಮರೆಯಲಾಗದ ‘ಕರಾಳ ದಿನಗಳು’ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರೆ, ಪ್ರಸ್ತುತ ದೇಶದ ಪರಿಸ್ಥಿತಿ ‘ಅಘೋಷಿತ ತುರ್ತುಸ್ಥಿತಿ’ ಎಂದು ವಿಪಕ್ಷ ಕಾಂಗ್ರೆಸ್ ಟೀಕಿಸಿದೆ.

‘ಭಾರತವು ತುರ್ತು ಪರಿಸ್ಥಿತಿಯನ್ನು ಒಂದು ಕರಾಳ ಅವಧಿಯೆಂದು ನೆನಪಿಸಿಕೊಳ್ಳುತ್ತದೆ, ಈ ಅವಧಿಯಲ್ಲಿ ಪ್ರತಿಯೊಂದು ಸಂಸ್ಥೆಯನ್ನೂ ಮಟ್ಟಹಾಕಲಾಯಿತು ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲಾಯಿತು. ಜನರು ಮಾತ್ರವಲ್ಲದೆ ವಿಚಾರಗಳು ಮತ್ತು ಸ್ವಾತಂತ್ರ್ಯವನ್ನು ಅಧಿಕಾರ ರಾಜಕಾರಣಕ್ಕೆ ಒತ್ತೆಯಾಳುಗಳಾಗಿರಿಸಲಾಯಿತು.

‘ನಮ್ಮ ಪ್ರಜಾಪ್ರಭುತ್ವದ ನೀತಿಗಳನ್ನು ಕಾಂಗ್ರೆಸ್ ಈ ರೀತಿ ದಮನ ಮಾಡಿತ್ತು. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 1975 ರಿಂದ 1977 ರವರೆಗಿನ ಅವಧಿಯು ಸಂಸ್ಥೆಗಳ ವ್ಯವಸ್ಥಿತ ವಿನಾಶಕ್ಕೆ ಸಾಕ್ಷಿಯಾಯಿತು" ಎಂದು ಪ್ರಧಾನಿ ಮೋದಿ #DarkDaysOfEmergency ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಇದಾ್ದ ಬಳಿಕ, ಮೋದಿ ಸರ್ಕಾರದ ಮಂತ್ರಿಗಳು ಮತ್ತು ಹಿರಿಯ ಬಿಜೆಪಿ ನಾಯಕರು ಇಂದಿರಾ ಗಾಂಧಿಯವರ ಆಳ್ವಿಕೆಯಲ್ಲಿ ಕಾಂಗ್ರೆಸ್ 'ಕಿರುಕುಳದ ಕಥೆಗಳನ್ನು' ಬಿಚ್ಚಿಟ್ಟಿದ್ದಾರೆ.

ಗೃಹ ಸಚಿವ ಅಮಿತ್ ಶಾ, ‘ಕಾಂಗ್ರೆಸ್ 1975 ರಲ್ಲಿ ಪ್ರಜಾಪ್ರಭುತ್ವವನ್ನು ತನ್ನ ದುರಾಸೆ ಮತ್ತು ಅಧಿಕಾರದ ದುರಹಂಕಾರಕ್ಕಾಗಿ ಕೊಲೆ ಮಾಡಿತು. ಒಂದು ಕುಟುಂಬದ ವಿರುದ್ಧ ಎದ್ದಿದ್ದ ಧ್ವನಿಯನ್ನು ಮೆಟ್ಟಿ ನಿಲ್ಲಲು ತುರ್ತು ಪರಿಸ್ಥಿತಿ ವಿಧಿಸಲಾಯಿತು. ಇದು ಭಾರತದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯವಾಗಿದೆ’ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುವಲ್ಲಿ ಜನ ಸಂಘ ಮತ್ತು ಆರ್‌ಎಸ್‌ಎಸ್ ಪಾತ್ರವನ್ನು ಶ್ಲಾಘಿಸಿದರು. ‘ ದೇಶವು ಭಾರತೀಯ ಜನ ಸಂಘ ಮತ್ತು ಆರ್‌ಎಸ್‌ಎಸ್‌ನಿಂದ ತುರ್ತು ಪರಿಸ್ಥಿತಿ-ವಿರೋಧಿ ಆಂದೋಲನವನ್ನು ಮುಂಚೂಣಿಯಿಂದ ಮುನ್ನಡೆಸಿದ ಸಾವಿರಾರು ಹೀರೋಗಳನ್ನು ನೆನಪಿಸಿಕೊಳ್ಳುತ್ತದೆ.’ ‘ತುರ್ತುಪರಿಸ್ಥಿತಿಯ ಅವಧಿಯು ದೇಶಕ್ಕೆ ಒಂದು ಕಪ್ಪುಚುಕ್ಕೆಯಾಗಿತ್ತು, ಏಕೆಂದರೆ, ಇಂದಿರಾ ಗಾಂಧಿ ಅವರ ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳಿಗಾಗಿ ಪ್ರಜಾಪ್ರಭುತ್ವವನ್ನು ಕೊಲ್ಲಲಾಯಿತು’ ಎಂದು ಅವರು ಟೀಕಿಸಿದ್ದಾರೆ.

ಮೋದಿ ಟೀಕೆಗೆ ತಿರುಗೇಟು ನೀಡಿರುವ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ನಿಗ್ರಹಿಸು, ದಮನ ಮಾಡು ಮತ್ತು ಅಧೀನಗೊಳಿಸಿ ಎಂಬ ಪದಗಳಿಗೆ ಸಮಾನಾರ್ಥಕವಾದ, ಸಂಸತ್ತನ್ನು ದುರ್ಬಲಗೊಳಿಸಿದ ಪ್ರಧಾನಿ, ಸಂವಿಧಾನವನ್ನು ತಿರಸ್ಕರಿಸಿದ ಪ್ರಧಾನಿ, ಸಂಸ್ಥೆಗಳನ್ನು ಸವೆಸಿದ ಪ್ರಧಾನಿ ಜನರಿಗೆ ಪ್ರಜಾಪ್ರಭುತ್ವ ಬೋಧಿಸಬಾರದು, ಏಕೆಂದರೆ, ಭಾರತವು 7 ವರ್ಷಗಳಿಂದ 'ಮೋದಿ-ಜೆನ್ಸಿ'ಯ ಅಡಿಯಲ್ಲಿದೆ ’ ಎಂದು ಟ್ವೀಟ್ ಮಾಡಿದ್ದಾರೆ.

ಸ್ವರಾಜ್ ಇಂಡಿಯಾ ನಾಯಕ ಪ್ರಶಾಂತ್ ಭೂಷಣ್, ‘46 ವರ್ಷಗಳ ಹಿಂದೆ, ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಹಕ್ಕುಗಳನ್ನು ದಮನ ಮಾಡಲಾಗಿತ್ತು. ಮಾಧ್ಯಮ ಸೆನ್ಸಾರ್ ಮಾಡಲಾಗಿತ್ತು ಮತ್ತು 100,000 ಮಂದಿಯನ್ನು ಬಂಧನದಲ್ಲಿಡಲಾಗಿದೆ. ಭಾರತವು ಆ ರಾತ್ರಿಯಿಂದ ಮತ್ತೆ ಎಂದಿಗೂ ನೋಡುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ, ಆ ದಿನ ಮತ್ತೆ ಬಂದಿದೆ. ಇಂದು ನಾವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಹಕ್ಕುಗಳು, ಸಂಸ್ಥೆಗಳಿಗೆ ಮುತ್ತಿಗೆ ಹಾಕಲಾಗಿದೆ. ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT