ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಗಾಂಧಿನಗರ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಗೆಲುವು

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಭನ್ವಾಡ ಪುರಸಭೆ ಕಾಂಗ್ರೆಸ್‌ ತೆಕ್ಕೆಗೆ
Last Updated 5 ಅಕ್ಟೋಬರ್ 2021, 10:57 IST
ಅಕ್ಷರ ಗಾತ್ರ

ಅಹಮದಾಬಾದ್: ರಾಜಧಾನಿ ಗಾಂಧಿನಗರದ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮಂಗಳವಾರ ಒಟ್ಟು 44 ಸ್ಥಾನಗಳಲ್ಲಿ 41 ಸ್ಥಾನ ಪಡೆಯುವ ಮೂಲಕ ಭಾರಿ ಬಹುಮತದ ಗೆಲುವು ಸಾಧಿಸಿದೆ.

2010ರಲ್ಲಿ ಜಿಎಂಸಿ ಅಸ್ತಿತ್ವಕ್ಕೆ ಬಂದ ನಂತರ ಆಡಳಿತಾರೂಢ ಬಿಜೆಪಿಗೆ ದೊರೆತ ದೊಡ್ಡಮಟ್ಟದ ಸ್ಪಷ್ಟಬಹುಮತ ಇದಾಗಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.

ಗಾಂಧಿನಗರವಲ್ಲದೆ ದೇವ್‌ಭೂಮಿ ದ್ವಾರಕಾದ ಓಖಾ ಪುರಸಭಾ ಚುನಾವಣೆಯಲ್ಲೂ ಬಿಜೆಪಿ ಭಾರಿ ಬಹುಮತ ಗಳಿಸಿ ಗೆಲುವು ಸಾಧಿಸಿದೆ. ಒಟ್ಟು 36 ಸ್ಥಾನಗಳ ಪೈಕಿ 34 ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಅಂತೆಯೇ ಬನಸ್ಕಾಂತಾದ ಥಾರಾ ಪುರಸಭೆಯಲ್ಲಿ ಬಿಜೆಪಿಯು 24 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 4 ಸ್ಥಾನಗಳನ್ನು ಗಳಿಸಿದೆ. ದೇವ್‌ಭೂಮಿ ದ್ವಾರಕಾದ ಭನ್ವಾಡ್ ಪುರಸಭೆಯಲ್ಲಿ ಒಟ್ಟು 24 ಸ್ಥಾನಗಳ ಪೈಕಿ ಕಾಂಗ್ರೆಸ್ 16 ಸ್ಥಾನ ಗಳಿಸಿ ಗೆಲುವು ಸಾಧಿಸಿದ್ದು, ಬಿಜೆಪಿ 8 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿದೆ.

ರಾಜ್ಯ ಚುನಾವಣಾ ಆಯೋಗ ನೀಡಿದ ಅಂಕಿ– ಅಂಶಗಳ ಪ್ರಕಾರ, 84 ಪುರಸಭೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ 62ರಲ್ಲಿ ಗೆದ್ದರೆ, ಕಾಂಗ್ರೆಸ್ 22 ಸ್ಥಾನಗಳಿಗೆ ಸೀಮಿತವಾಗಿದೆ. ಅದೇ ರೀತಿ, 44 ಪುರಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ 37 ಮತ್ತು ಕಾಂಗ್ರೆಸ್ ಕೇವಲ 3ರಲ್ಲಿ ಗೆದ್ದಿದೆ. ಒಟ್ಟಾರೆಯಾಗಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 175 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 45 ಹಾಗೂ ಇತರ ಪಕ್ಷಗಳು 9 ಸ್ಥಾನಗಳನ್ನು ಗಳಿಸಿವೆ.

2022ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಬಿಜೆಪಿಯು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಗೆಲುವಿನ ಹಾದಿಯನ್ನು ಮುನ್ನಡೆಸುತ್ತಿದೆ. ಕಾಂಗ್ರೆಸ್ ಮತ್ತಷ್ಟು ದುರ್ಬಲವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಗೆ ಅತಿದೊಡ್ಡ ಹಿನ್ನಡೆಯಾಗಿದೆ. ಎಎಪಿಯು ಕೇವಲ ಒಂದು ಸ್ಥಾನ ಮಾತ್ರ ಗಳಿಸಿದೆ.

‘ನಾವು ಚುನಾವಣೆಯಲ್ಲಿ ಸೋತಿದ್ದರೂ, ಭವಿಷ್ಯದಲ್ಲಿ ನಿಜವಾದ ಹೋರಾಟ ಬಿಜೆಪಿ ಮತ್ತು ಎಎಪಿ ನಡುವೆ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ಮತ ಹಂಚಿಕೆಯು ನಾವು ಕಾಂಗ್ರೆಸ್ ಅನ್ನು ಹೇಗೆ ಸೋಲಿಸಿದ್ದೇವೆ ಎನ್ನುವುದನ್ನು ಹೇಳುತ್ತದೆ’ ಎಂದು ಗುಜರಾತ್‌ನ ಎಎಪಿಯ ಅಧ್ಯಕ್ಷ ಗೋಪಾಲ್ ಇಟಾಲಿಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಮೂರನೇ ಪಕ್ಷಕ್ಕೆ ಸ್ಥಾನವಿಲ್ಲ ಎಂದು ಮತದಾರರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಎಎಪಿಯನ್ನು ಗುರಿಯಾಗಿಸಿಕೊಂಡು ಗುಜರಾತ್‌ನ ಬಿಜೆಪಿಯ ಅಧ್ಯಕ್ಷ ಸಿ.ಆರ್. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT