ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಬಿಜೆಪಿಗೆ ಎಲ್ಲಾ ವರ್ಗದ ಬೆಂಬಲವಿದೆ: ಡಾ. ಸಿ.ಎನ್‌. ಅಶ್ವತ್ಥನಾರಾಯಣ

Last Updated 2 ಏಪ್ರಿಲ್ 2021, 19:01 IST
ಅಕ್ಷರ ಗಾತ್ರ

‘ಬಿಜೆಪಿ ಎಲ್ಲಾ ವರ್ಗದವರನ್ನೂ ಒಳಗೊಂಡಿರುವ ಪಕ್ಷ ಆದರೆ, ಕೇರಳದಲ್ಲಿ ಕೆಲವು ಸಮುದಾಯದವರಲ್ಲಿ ಬಿಜೆಪಿಯ ಬಗ್ಗೆ ಭಯ ಹುಟ್ಟಿಸುವ ಪ್ರಯತ್ನವನ್ನು ವಿರೋಧಪಕ್ಷಗಳವರು ಮಾಡುತ್ತಿದ್ದಾರೆ. ಕ್ರೈಸ್ತ ಸಮುದಾಯದವರಿಗೆ ಇದನ್ನು ಮನವರಿಕೆ ಮಾಡಿಕೊಡುವ ಸರ್ವ ಪ್ರಯತ್ನಗಳನ್ನೂ ಬಿಜೆಪಿ ಮಾಡುತ್ತಿದೆ’ ಎಂದು ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ. ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

l ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯವೇನು?

ಕೆರಳದ ಜನರಿಗೆ ಈಗ ಬಿಜೆಪಿ ಮೇಲೆ ವಿಶ್ವಾಸ ಮೂಡಿದೆ. ಬಿಜೆಪಿಯೇ ದೇಶ ಮತ್ತು ರಾಜ್ಯವನ್ನು ಮುನ್ನಡೆಸುವುದನ್ನು ಅವರು ಎದುರು ನೋಡುತ್ತಿದ್ದಾರೆ. ಎಲ್‌ಡಿಎಫ್‌ ಹಾಗೂ ಯುಡಿಎಫ್‌ಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ. ಸ್ವಹಿತಾಸಕ್ತಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕಾರಣ ಆ ಎರಡೂ ಮೈತ್ರಿಕೂಟಗಳು ವಿಫಲವಾಗಿವೆ. ಈಗ ಅವರು ಅಪ್ರಸ್ತುತರಾಗಿದ್ದಾರೆ.ಜನರ ಒಳಿತಿಗಾಗಿ ಈ ಎರಡೂ ಮೈತ್ರಿಕೂಟಗಳಿಂದ ಕೇರಳವನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಉತ್ತಮ ಶಿಕ್ಷಣ, ಉದ್ಯಮಶೀಲತಾ ಕೌಶಲ ಮುಂತಾದ ಅನೇಕ ಗುಣಗಳು ಕೇರಳದಲ್ಲಿವೆ. ಹೊಣೆಗಾರಿಕೆ ಮತ್ತು ಪಾರದರ್ಶಕತೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಏಳಿಗೆ ಸಾಧಿಸಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ಕೇಂದ್ರ ಸರ್ಕಾರವು ಕೇರಳಕ್ಕೆ ಸಾಧ್ಯವಾದ ಎಲ್ಲಾ ನೆರವುಗಳನ್ನೂ ನೀಡಿದೆ.

l ಕ್ರೈಸ್ತ ಮತದಾರರ ಮನವೊಲಿಸುವ ಪ್ರಯತ್ನ ಫಲಿಸುವುದೆಂಬ ಭಾವನೆ ಇದೆಯೇ?

ದೇಶಭಕ್ತಿ ಹೊಂದಿರುವ ಎಲ್ಲಾ ಸಮುದಾಯಗಳ ಮತಗಳನ್ನು ಪಡೆಯುವ ವಿಶ್ವಾಸ ಬಿಜೆಪಿಗೆ ಇದೆ. ಒಂದು ರಾಜಕೀಯ ಪಕ್ಷವಾಗಿ ನಾವು ಎಲ್ಲಾ ಧರ್ಮ, ಜಾತಿ ಹಾಗೂ ವರ್ಗದ ಜನರಿಗೆ ಮುಕ್ತವಾಗಿದ್ದೇವೆ. ವಿರೋಧಪಕ್ಷಗಳವರು ಕೆಲವು ಸಮುದಾಯದವರಲ್ಲಿ ನಮ್ಮ ಬಗ್ಗೆ ಭಯ ಮೂಡಿಸುತ್ತಿದ್ದಾರೆ. ನಮ್ಮ ಆದ್ಯತೆ ದೇಶ, ಆನಂತರ ಪಕ್ಷ ಅದಾದ ಮೇಲೆ ಉಳಿದೆಲ್ಲವೂ ಬರುತ್ತವೆ. ದೇಶದಲ್ಲಿ ನಂಬಿಕೆ ಹೊಂದಿದ್ದೇವೆ ಎಂದಮೇಲೆ ಎಲ್ಲಾ ಸಮುದಾಯಗಳ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟು ಎಲ್ಲರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಬಿಜೆಪಿ ಯಾವತ್ತೂ ಭೇದಭಾವ ಮಾಡಿಲ್ಲ. ಎಲ್‌ಡಿಎಫ್‌, ಯುಡಿಎಫ್‌ಗಳೇ ಓಲೈಕೆ ಮತ್ತು ವಿಭಜನೆಯ ರಾಜಕೀಯ ಮಾಡುತ್ತಾ ಬಂದಿವೆ.

l ಈ ಸಂದೇಶವನ್ನು ಆ ಸಮುದಾಯಗಳಿಗೆ ನೀಡಲು ನಿಮಗೆ ಸಾಧ್ಯವಾಗಿದೆಯೇ?

ನಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದೇವೆ. ದೇಶಭಕ್ತರು ಹಾಗೂ ರಾಷ್ಟ್ರೀಯವಾದಿಗಳು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ನಾವು ನಂಬಿದ್ದೇವೆ. ಚರ್ಚ್‌ಗಳ ಮುಖಂಡರು ಸಹ ಪ್ರಧಾನಿ ಮೋದಿ ಹಾಗೂ ರಾಜ್ಯದ ಇತರ ಬಿಜೆಪಿ ಮುಖಂಡರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ.

l ಕೇರಳದ ಚುನಾವಣಾ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮಹತ್ವದ ಸ್ಥಾನ ಇದೆ. ನೀವು ಆ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಿರಾ?

ನಾವು ಯಾರಿಗೂ ಬಾಗಿಲು ಮುಚ್ಚಿಲ್ಲ. ಆದರೆ, ಓಲೈಕೆ ರಾಜಕಾರಣವನ್ನು ವಿರೋಧಿಸುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲಾ ಮುಸ್ಲಿಂ ರಾಷ್ಟ್ರಗಳ ಜತೆಗೆ ಬಾಂಧವ್ಯ ಹೊಂದಿದೆ. ಜಿಹಾದ್‌ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವ ಗುಂಪುಗಳನ್ನು ಮಾತ್ರ ನಾವು ವಿರೋಧಿಸುತ್ತೇವೆ. ಜಾತಿ– ಧರ್ಮಗಳ ಭೇದಭಾವವಿಲ್ಲದೆ, ಎಲ್ಲರಿಗೂ ಬಿಜೆಪಿ ಮುಕ್ತವಾಗಿದೆ. ನಾವು ನಿರೀಕ್ಷಿಸುವುದು ದೇಶಭಕ್ತಿಯನ್ನು ಮಾತ್ರ. ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು, ರಾಷ್ಟ್ರಹಿತದ ವಿಚಾರ ಬಂದಾಗ ನಾವೆಲ್ಲರೂ ಒಂದೇ.

l ಕೇರಳದಲ್ಲಿ ಬಿಜೆಪಿಯ ಬೆಳವಣಿಗೆಗೆ ‘ಹಿಂದುತ್ವ’ದ ಹಣೆಪಟ್ಟಿ ಅಡ್ಡಿಯಾಗಿದೆ ಎಂದು ನೀವು ಭಾವಿಸುತ್ತೀರಾ?

ಹಿಂದುತ್ವ ಎಂಬುದು ಜೀವನ ವಿಧಾನ. ನಮ್ಮ ಸಂಸ್ಕೃತಿಯೇ ನಮ್ಮ ಜೀವನ ವಿಧಾನ. ಮೂಲತಃ ನಾವು ಸಂಸ್ಕೃತಿ ಮತ್ತು ಸಂಪ್ರದಾಯದ ಪರ ಇರುವವರು. ಅವುಗಳನ್ನು ರಕ್ಷಿಸಿ ಬೆಳೆಸುವ ಅಗತ್ಯವಿದೆ. ಅವರವರ ಸಂಪ್ರದಾಯ, ಸಂಸ್ಕೃತಿಯನ್ನು ಎಲ್ಲರೂ ಪಾಲಿಸಬಹುದಾಗಿದೆ. ಆದರೆ ಇತರರ ಸಂಸ್ಕೃತಿ ಸಂಪ್ರದಾಯಗಳನ್ನು ನಾಶಪಡಿಸುವ ಮೂಲಕ ಅಲ್ಲ.

l ಯುಡಿಎಫ್‌ ಮತ್ತು ಎಲ್‌ಡಿಎಫ್‌ ಪೈಕಿ ಕೇರಳದಲ್ಲಿ ನಿಮ್ಮ ಪ್ರಮುಖ ಎದುರಾಳಿ ಯಾರು?

ಆಡಳಿತ, ಆರ್ಥಿಕತೆ ಅಷ್ಟೇ ಅಲ್ಲ, ಸಂಸ್ಕೃತಿ– ಸಂಪ್ರದಾಯಗಳನ್ನು ಕಾಪಾಡುವಲ್ಲೂ ಈ ಎರಡೂ ಮೈತ್ರಿಕೂಟಗಳು ವಿಫಲವಾಗಿವೆ. ಸಂಸ್ಕೃತಿ ಸಂಪ್ರದಾಯಗಳಲ್ಲಿ ವಿಶ್ವಾಸ ಇಲ್ಲದವರು ಅವುಗಳನ್ನು ಹೇಗೆತಾನೇ ರಕ್ಷಿಸುತ್ತಾರೆ? ರಾಜ್ಯದ ಸಂಸ್ಕೃತಿಯನ್ನು ನಾಶಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಶಬರಿಮಲೆ, ಭಯೋತ್ಪಾದನೆ, ಲವ್‌ ಜಿಹಾದ್‌ ಮುಂತಾದ ವಿಚಾರಗಳು ಕೇರಳದಲ್ಲಿ ಮಹತ್ವದ್ದಾಗಿದ್ದರೂ, ಈ ವಿಚಾರಗಳ ಬಗ್ಗೆ ಎರಡೂ ಮೈತ್ರಿಕೂಟಗಳಲ್ಲಿ ಸ್ಪಷ್ಟತೆ ಇಲ್ಲ. ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳಲ್ಲೂ ಇವುಗಳಲ್ಲಿ ಸ್ಪಷ್ಟತೆ ಇಲ್ಲ.

l ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚನೆ ವಿಶ್ವಾಸದಲ್ಲಿ ನೀವಿದ್ದೀರಿ. ಈಗಾಗಲೇ ಎಲ್‌ಡಿಎಫ್‌ ಅಥವಾ ಯುಡಿಎಫ್‌ ಜತೆ ಮಾತುಕತೆ ಆರಂಭಿಸಿದ್ದೀರಿ ಎಂದು ಭಾವಿಸಬಹುದೇ?

ನಾವು ಎನ್‌ಡಿಎ ಮಿತ್ರಪಕ್ಷಗಳ ಜತೆಗೆ ಮಾತ್ರ ಸಂಪರ್ಕದಲ್ಲಿದ್ದೇವೆ. ಯುಡಿಎಫ್‌, ಎಲ್‌ಡಿಎಫ್‌ ಎರಡೂ ನಮಗೆ ಸ್ಪರ್ಧಿಗಳೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT