ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಬಿಜೆಪಿ ಮುಖಂಡನ ಹತ್ಯೆ

Last Updated 5 ಅಕ್ಟೋಬರ್ 2020, 8:01 IST
ಅಕ್ಷರ ಗಾತ್ರ

ಕೋಲ್ಕತ್ತ: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳುಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಮನೀಷ್‌ ಶುಕ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಟಿಟಗಢದ ಬಿ.ಟಿ. ರಸ್ತೆಯಲ್ಲಿ ಭಾನುವಾರ ರಾತ್ರಿ 9.30ರ ಸುಮಾರಿಗೆ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಪುರಸಭೆ ಸದಸ್ಯರಾಗಿರುವ ಮನೀಷ್‌ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯು ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)‌ ಹಾಗೂ ಬಿಜೆಪಿ ನಡುವಣ ಜಟಾಪಟಿಗೆ ಕಾರಣವಾಗಿದೆ.

‘ಟಿಎಂಸಿ ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಈ ರೀತಿ ಮಾಡುತ್ತಿದೆ. ಇದು ನಾಚಿಕೆಗೇಡಿನ ವಿಷಯ. ಪೊಲೀಸ್‌ ಠಾಣೆಯ ಎದುರೇ ಹತ್ಯೆ ನಡೆದಿದೆ. ಹೀಗಾಗಿ ಸ್ಥಳೀಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ನಂಬಿಕೆ ನಮಗಿಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯಾ ಹೇಳಿದ್ದಾರೆ.

‘ಬಿಜೆಪಿಯ ಆಂತರಿಕ ಕಲಹದಿಂದಾಗಿ ಈ ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ನಮ್ಮ ಪಾತ್ರವೇನೂ ಇಲ್ಲ. ಬಿಜೆಪಿಯವರು ಅನಗತ್ಯವಾಗಿ ನಮ್ಮ ಪಕ್ಷದ ಹೆಸರನ್ನು ಎಳೆದುತರುತ್ತಿದ್ದಾರೆ’ ಎಂದು ಟಿಎಂಸಿ ಮುಖಂಡ ನಿರ್ಮಲ್‌ ಘೋಷ್‌ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿ ಬಿಜೆಪಿ, ಬ್ಯಾರಕ್‌ಪುರನಲ್ಲಿ ಸೋಮವಾರ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ.

‘ನಾವು ದುಷ್ಕರ್ಮಿಗಳ ಪತ್ತೆಕಾರ್ಯ ಕೈಗೊಂಡಿದ್ದೇವೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT