ಬುಧವಾರ, ಅಕ್ಟೋಬರ್ 20, 2021
29 °C

ಬಂಗಾಳ ರಾಜ್ಯಸಭೆ ಉಪಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ: ಬಿಜೆಪಿ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತಾ: ಅಕ್ಟೋಬರ್‌ 4ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭೆ ಉಪ ಚುನಾವಣೆಗೆ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ವಿರೋಧ ಪಕ್ಷ ಬಿಜೆಪಿ ಸೋಮವಾರ ಪ್ರಕಟಿಸಿದೆ.

ಬಿಜೆಪಿಯ ಈ ನಿರ್ಧಾರದಿಂದ ಆಡಳಿತಾರೂಢ ಟಿಎಂಸಿ ಪಕ್ಷದ ಅಭ್ಯರ್ಥಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲು ದಾರಿ ಸುಗಮವಾಗಿದೆ.

ಕಳೆದ ವಾರವಷ್ಟೇ ಕಾಂಗ್ರೆಸ್‌ ತೊರೆದು ತಮ್ಮ ಪಕ್ಷ ಸೇರಿದ್ದ ಸುಷ್ಮಿತಾ ದೇವ್ ಅವರನ್ನು ಆಡಳಿತಾರೂಢ ಟಿಎಂಸಿ ಪಕ್ಷ ಈ ಉಪಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಅಸ್ಸಾಂನ ಹಿರಿಯ ಕಾಂಗ್ರೆಸ್ ನಾಯಕ ದಿ. ಸಂತೋಷ್ ಮೋಹನ್ ದೇವ್ ಅವರ ಪುತ್ರಿ ಸುಷ್ಮಿತಾ ದೇವ್‌ ಅವರು, ಕಾಂಗ್ರೆಸ್‌ನ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದರು.

ಟಿಎಂಸಿಯ ರಾಜ್ಯಸಭಾ ಸದಸ್ಯೆಯಾಗಿದ್ದ ಮಾನಸ್‌ ಭುನಿಯಾ ಅವರು ಪಶ್ಚಿಮ ಮೇದಿನಿಪುರದ ಸಬಾಂಗ್‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ನಂತರ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

‘ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಉಪಚುನಾವಣೆಯ ಫಲಿತಾಂಶ ಏನೆಂದು ಈಗಾಗಲೇ ಗೊತ್ತಾಗಿದೆ. ಹಾಗಾಗಿ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಶಾಸಕರಾಗಿ ಆಯ್ಕೆಯಾಗದೇ ಸಿ.ಎಂ ಸ್ಥಾನಕ್ಕೆ ಏರಿರುವವರನ್ನು ಮತ್ತೆ ಶಾಸಕರಾಗಿ ಆಯ್ಕೆಯಾಗದಂತೆ ನೋಡಿಕೊಳ್ಳುವತ್ತ ನಮ್ಮ ಗಮನ. ಜೈ ಮಾ ಕಲಿ‘ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ಚುನಾವಣೆ ಅವಧಿಯಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿಯವರು, ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಜಯಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು