ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥ ರಾಹುಲ್‌ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದೇಕೆ?: ಬಿಜೆಪಿ ಪ್ರಶ್ನೆ

Last Updated 24 ಮಾರ್ಚ್ 2023, 11:08 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ರಾಹುಲ್‌ ಗಾಂಧಿ ಅವರನ್ನು ಬೆಂಬಲಿಸಿ ಕಾಂಗ್ರೆಸ್‌ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವುದು ಏಕೆ ಎಂದು ಬಿಜೆಪಿ ಶುಕ್ರವಾರ ಪ್ರಶ್ನಿಸಿದೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್‌, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು ಮೋದಿ ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ತಪ್ಪಿತಸ್ಥರು ಎಂದಿದೆ. ಈ ಸಂಬಂಧ 2 ವರ್ಷ ಜೈಲು ಹಾಗೂ ದಂಡ ಪಾವತಿಯ ಶಿಕ್ಷೆ ವಿಧಿಸಿದೆ.

ನ್ಯಾಯಾಲಯದ ತೀರ್ಪಿನ ವಿರುದ್ಧ ಕಾಂಗ್ರೆಸ್‌ ನಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನು ಖಂಡಿಸಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಭೂಪೇಂದರ್‌ ಯಾದವ್‌ ಅವರು, 'ಅವರು (ಕಾಂಗ್ರೆಸ್ಸಿಗರು) ಏಕೆ ಈ ಪ್ರತಿಭಟನಾ ಮೆರವಣಿಗೆ ಮಾಡಲು ಹೊರಟಿದ್ದಾರೆ ಎಂಬುದನ್ನು ತಿಳಿಯಲು ಬಯಸುತ್ತೇನೆ. ಹಿಂದುಳಿದ ವರ್ಗದವರನ್ನು ಅವಮಾನಿಸುವ ಹಕ್ಕು ರಾಹುಲ್‌ ಅವರಿಗೆ ಇದೆ ಎಂದು ಈ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆಯೇ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

'ಅವರು (ರಾಹುಲ್‌ ಗಾಂಧಿ) ಮೋದಿ ಉಪನಾಮವನ್ನು ಅವಮಾನಿಸಿದ್ದಾರೆ. ಅವರಿಗೆ ಶಿಕ್ಷೆ ವಿಧಿಸಿದ್ದು ನ್ಯಾಯಾಲಯದ ನಿರ್ಧಾರವಾಗಿದ್ದರೆ, ಅದರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಬೇಕೇ? ಇದು ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅವಮಾನವಾಗುವುದಿಲ್ಲವೇ' ಎಂದು ಪ್ರಶ್ನಿಸಿದ್ದಾರೆ.

'ರಾಹುಲ್‌ ಗಾಂಧಿ, ದೇಶದ ಹೆಸರು ಕೆಡಿಸುವ ಉದ್ದೇಶದಿಂದ ಸುಳ್ಳು ಹೇಳುವುದನ್ನು ಚಾಳಿ ಮಾಡಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ಮಾತುಗಳು, ಅಲ್ಪಸಂಖ್ಯಾತ ಸಮುದಾಯದ ಬಗೆಗೆ ಅವರು ಹೊಂದಿರುವ ಮನಸ್ಥಿತಿಯನ್ನು ಪ್ರತಿಫಲಿಸುತ್ತದೆ. ಇದು ಅತ್ಯಂತ ನಾಚಿಕೆಗೇಡು' ಎಂದು ಟೀಕಿಸಿದ್ದಾರೆ.

'ವಿರೋಧ ಪಕ್ಷದ ಬೇಜವಾಬ್ದಾರಿ ನಡೆ, ಸಂಸತ್‌ ಕಾರ್ಯಾಚರಣೆಗೆ ಅಡ್ಡಿ, ವಿದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದು, ಇವೆಲ್ಲಾ ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತೋರಿಸುತ್ತವೆ' ಎಂದೂ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT