ಶನಿವಾರ, ಮೇ 28, 2022
22 °C

ಪವಾರ್ ಹಿಂದು ವಿರೋಧಿ: ಬಿಜೆಪಿ ವಿಡಿಯೊ ಟ್ವೀಟ್, ತಿರುಚಿದ ಹೇಳಿಕೆ ಎಂದ ಎನ್‌ಸಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹಿಂದು ವಿರೋಧಿ ಎಂದು ಟೀಕಿಸಿರುವ ಬಿಜೆಪಿ, ಅವರು ಹಿಂದು ಧರ್ಮದ ವಿರುದ್ಧ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೊವೊಂದನ್ನು ಟ್ವೀಟ್ ಮಾಡಿದೆ.

ಆದರೆ, ‘ಇದು ತಿರುಚಲಾದ ವಿಡಿಯೊ. ಪವಾರ್ ವರ್ಚಸ್ಸಿಗೆ ಮಸಿ ಬಳಿಯಲು ಬಿಜೆಪಿ ಈ ಕೃತ್ಯ ಎಸಗಿದೆ’ ಎಂದು ಎನ್‌ಸಿಪಿಯ ಯುವ ಘಟಕ ಆರೋಪಿಸಿದೆ. ಜತೆಗೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈಯ ಸೈಬರ್ ಸೆಲ್ ಪೊಲೀಸರಿಗೆ ಮನವಿ ಮಾಡಿದೆ.

‘ನಾಸ್ತಿಕ ಶರದ್ ಪವಾರ್ ಯಾವಾಗಲೂ ಹಿಂದು ಧರ್ಮವನ್ನು ದ್ವೇಷಿಸುತ್ತಾರೆ. ಈ ನಿಲುವು ತೆಗೆದುಕೊಂಡಿರದಿದ್ದರೆ ಅವರು ರಾಜಕೀಯವಾಗಿ ಯಶಸ್ಸು ಸಾಧಿಸುತ್ತಿರಲಿಲ್ಲ’ ಎಂದು ಬಿಜೆಪಿ ಮಹಾರಾಷ್ಟ್ರ ಘಟಕವು ಶುಕ್ರವಾರ ವಿಡಿಯೊ ತುಣುಕೊಂದನ್ನು ಟ್ವೀಟ್ ಮಾಡಿತ್ತು.

(ಬಿಜೆಪಿಯ ಮಹಾರಾಷ್ಟ್ರ ಘಟಕ ಮಾಡಿದ್ದ ಟ್ವೀಟ್)

ಟ್ವೀಟ್‌ನಲ್ಲಿ ಪ್ರಕಟಿಸಿರುವುದು ಎಡಿಟ್ ಮಾಡಿರುವ ವಿಡಿಯೊ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನ ಸೆಳೆದಿದ್ದಾರೆ. ಇದು ಮೇ 9ರಂದು ಮಹಾರಾಷ್ಟ್ರದ ಸತಾರದಲ್ಲಿ ನಡೆದ ಕಾರ್ಯಕ್ರಮದ ವಿಡಿಯೊ. ಅಲ್ಲಿ ಪವಾರ್ ಅವರು ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಸಂಬಂಧಿಸಿದ ಜವಾಹರ್ ರಾಥೋಡ್ ಅವರ ಕವನವೊಂದನ್ನು ಉಲ್ಲೇಖಿಸಿ ಮಾತನಾಡಿದ್ದರು ಎನ್ನಲಾಗಿದೆ.

ಈ ಕುರಿತು ಎನ್‌ಸಿಪಿ ಯುವ ಘಟಕದ ಅಧ್ಯಕ್ಷ ಸೂರಜ್ ಚವಾಣ್ ಪೊಲೀಸರಿಗೆ ದೂರು ನೀಡಿದ್ದಾರೆ.

‘ತಿರುಚಿದ ವಿಡಿಯೊವನ್ನು ಟ್ವಿಟರ್‌ನಲ್ಲಿ ಪ್ರಕಟಿಸುವ ಮೂಲಕ ಸಮುದಾಯಗಳ ನಡುವೆ ಒಡಕು ಮೂಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಸಂಚು ರೂಪಿಸಲಾಗಿದೆ. ಸೆಕ್ಷನ್ 499, 500, 66ಎ ಹಾಗೂ 66ಎಫ್‌ ಅನ್ವಯ ಟ್ವಿಟರ್‌ ಹ್ಯಾಂಡಲ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸೂರಜ್ ಚವಾಣ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು