ಬುಧವಾರ, ಜೂನ್ 29, 2022
26 °C

ಧಾರ್ಮಿಕ ಸ್ಥಳಗಳನ್ನೇ ಗುರಿಯಾಗಿಸಿ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ: ಮಾಯಾವತಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ನಿರುದ್ಯೋಗ, ಹಣದುಬ್ಬರಗಳಂತಹ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ ಜನರ ದಾರಿ ತಪ್ಪಿಸುತ್ತಿದೆ. ರಾಷ್ಟ್ರ ದುರ್ಬಲಗೊಳ್ಳಲು ಕಾರಣವಾಗುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಯಾವತಿ ವಾಗ್ದಾಳಿ ನಡೆಸಿದ್ದಾರೆ.

ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಹಣದುಬ್ಬರಗಳಂತಹ ಜ್ವಲಂತ ಸಮಸ್ಯೆಗಳಿಂದ ಜನರನ್ನು ವಿಮುಖರಾಗಿಸಲು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಪ್ರಮುಖವಾಗಿ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಇದನ್ನು ರಾಜಾರೋಷವಾಗಿ ಮಾಡಲಾಗುತ್ತಿದೆ ಎಂದು ಮಾಯಾವತಿ ಆರೋಪಿಸಿದರು.

ಇಂತಹ ಬೆಳವಣಿಗೆ ಸ್ವಾತಂತ್ರ್ಯ ಭಾರತದ ಪರಿಸ್ಥಿತಿಯನ್ನು ಯಾವ ಹಂತದಲ್ಲಿ ಬೇಕಿದ್ದರೂ ಹದಗೆಡಿಸಬಹುದು. ಜ್ಞಾನವಾಪಿ, ಮಥುರ, ತಾಜ್‌ ಮಹಲ್‌ ಮತ್ತಿತರ ಸ್ಥಳಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಪಿತೂರಿ ನಡೆಯುತ್ತಿದೆ. ಇಂತಹ ಪ್ರಯತ್ನಗಳಿಂದ ದೇಶ ದುರ್ಬಲಗೊಳ್ಳಲಿದೆ. ಈ ವಿಚಾರವನ್ನು ಗಂಭೀರವಾಗಿ ಬಿಜೆಪಿ ಪರಿಗಣಿಸಬೇಕು' ಎಂದು ಮಾಯಾವತಿ ಆಗ್ರಹಿಸಿದ್ದಾರೆ.

ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಸ್ಥಾನದ ವಿವಾದ, ಹಿಂದೂ ಮೂರ್ತಿಗಳು ಇರಬಹುದೆಂದು ಗ್ರಹಿಸಿ ತಾಜ್‌ ಮಹಲ್‌ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು ತೆರೆಯಬೇಕು ಎಂದು ಕೋರಿ ಅಲಹಾಬಾದ್‌ ಕೋರ್ಟ್‌ಗೆ ಅರ್ಜಿ ಹಾಕಿದ ವಿಚಾರಗಳಿಗೆ ಸಂಬಂಧಿಸಿ ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ನಿರ್ದಿಷ್ಟ ಧರ್ಮದ ಕ್ಷೇತ್ರವಿರುವ ಸ್ಥಳಗಳ ಹೆಸರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬದಲಾಯಿಸಲಾಗುತ್ತಿದೆ. ಇಂತಹ ಬದಲಾವಣೆಯಿಂದ ಶಾಂತಿ ಮತ್ತು ಸೌಹಾರ್ದತೆಯ ಸ್ಥಾಪನೆ ಅಸಾಧ್ಯ. ಇದು ಕೇವಲ ಪರಸ್ಪರ ಸಮುದಾಯಗಳ ಮಧ್ಯೆ ದ್ವೇಷವನ್ನಷ್ಟೇ ಹುಟ್ಟುಹಾಕುತ್ತದೆ. ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುವ ಮೊದಲು ಸಾಮಾನ್ಯ ಜನರಿಗೆ ಅಥವಾ ರಾಷ್ಟ್ರಕ್ಕೆ ಏನು ಲಾಭವಿದೆ ಎಂಬುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.

ರಾಷ್ಟ್ರದ ಹಿತದೃಷ್ಟಿಯಿಂದ ಬಿಎಸ್‌ಪಿಯ ಸಲಹೆ ಇದು ಎಂದು ಮಾಯಾವತಿ ಒತ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು