ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶ್ರತ್‌ ಎನ್‌ಕೌಂಟರ್‌: ಸಿಬಿಐ ವಿಚಾರಣೆಗೆ ಗುಜರಾತ್‌ ಸರ್ಕಾರದ ಅನುಮತಿ ಇಲ್ಲ

Last Updated 20 ಮಾರ್ಚ್ 2021, 15:01 IST
ಅಕ್ಷರ ಗಾತ್ರ

ಅಹಮದಾಬಾದ್: ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾದ ಬಾಕಿ ಮೂವರು ಆರೋಪಿ ಪೊಲೀಸ್‌ ಅಧಿಕಾರಿಗಳ ವಿಚಾರಣೆ ನಡೆಸಲು ಗುಜರಾತ್‌ ಸರ್ಕಾರ ಸಿಬಿಐಗೆ ಅನುಮತಿ ನಿರಾಕರಿಸಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಗಿರೀಶ್ ಎಲ್. ಸಿಂಘಾಲ್, ಮಾಜಿ ಡಿವೈಎಸ್‌ಪಿ ತರುಣ್ ಬರೋಟ್ ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಣಜು ಚೌಧರಿಯವರ ವಿಚಾರಣೆಗೆ ಅನುಮತಿ ನಿರಾಕರಿಸಿರುವುದು, ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸರ್ಕಾರದ ಪತ್ರವನ್ನು ಶನಿವಾರ ಸಲ್ಲಿಸಿದಾಗ ಬಹಿರಂಗಗೊಂಡಿದೆ.

ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರ ಮತ್ತು ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಕೆ. ಅಮೀನ್ ಅವರ ವಿಚಾರಣೆಗೆ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಆರೋಪಿಯಾಗಿದ್ದ ಮಾಜಿ ಡಿಜಿಪಿ ಪಿ.ಪಿ. ಪಾಂಡೆ ಅವರನ್ನು ಮೊದಲ ಬಾರಿಗೆ ಇದೇ ರೀತಿ ಪ್ರಕರಣದಿಂದ ಕೈಬಿಡಲಾಗಿತ್ತು. ಇನ್ನು ಮತ್ತೊಬ್ಬ ಆರೋಪಿ ಜೆ.ಜಿ. ಪರ್ಮಾರ್ ಕಳೆದ ವರ್ಷ ನಿಧನರಾದರು.

ವಿಚಾರಣೆಯಿಂದ ಆರೋಪಿಗಳನ್ನು ಕೈಬಿಡುವ ಸರ್ಕಾರದ ಆದೇಶಗಳ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸದ ಕಾರಣ ಮತ್ತು ‘ಈ ಆದೇಶಗಳನ್ನು ಅಂಗೀಕರಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ಲಿಖಿತವಾಗಿ ಸಲ್ಲಿಸಿರುವುದರಿಂದ ಉಳಿದ ಮೂವರು ಅಧಿಕಾರಿಗಳನ್ನು ಸಹ ಪ್ರಕರಣದಿಂದ ಕೈಬಿಡುವ ಸಾಧ್ಯತೆಯಿದೆ. ವಿಚಾರಣೆ ಆರಂಭವಾಗುವ ಮೊದಲೇ ಎನ್‌ಕೌಂಟರ್ ಪ್ರಕರಣ ಮುಚ್ಚಿಹೋಗುವ ಸಾಧ್ಯತೆ ಇದೆ. ಈ ವಿಶೇಷ ಪ್ರಕರಣದ ಆದೇಶವನ್ನು ಇದೇ 31ರಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸಿಬಿಐ, ಗುಜರಾತ್ ಸರ್ಕಾರದ ಪತ್ರದ ಪ್ರತಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿ, ಸಿಂಘಾಲ್, ಬರೋಟ್ ಮತ್ತು ಚೌಧರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನಿರಾಕರಿಸಿದೆ ಎಂಬ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿತು. ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಲು ಸಿಆರ್‌ಪಿಸಿಯ 197ರ ಸಂಹಿತೆಯಡಿ ಮೊದಲು ಸರ್ಕಾರದ ಅನುಮತಿ ಪಡೆಯಬೇಕಿದೆ.

‘ಮಹಿಳಾ ವಾಸ್ತುಶಿಲ್ಪಿ ಮೇಲಿನ ಅನಧಿಕೃತ ಕಣ್ಗಾವಲು’ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಗಿರೀಶ್ ಎಲ್. ಸಿಂಘಾಲ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಇಶ್ರತ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಸಿಂಘಾಲ್ ಘಟನಾ ಸ್ಥಳದಲ್ಲಿ ಇರಲಿಲ್ಲ, ಆದರೆ ಪಿತೂರಿಯ ಭಾಗವಾಗಿದ್ದರು. ಚೌಧರಿ ತನ್ನ ಸ್ಟೆನ್‌ಗನ್‌ನಿಂದ 10 ಸುತ್ತು ಗುಂಡು ಹಾರಿಸಿದ್ದಾರೆ. ಬರೋಟ್ ತನ್ನ ರಿವಾಲ್ವರ್‌ನಿಂದ ಆರು ಸುತ್ತು ಮತ್ತು ಇನ್ನೊಬ್ಬ ಸಹೋದ್ಯೋಗಿಯ ರಿವಾಲ್ವರ್‌ನಿಂದ 3 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದೆ.

2019ರ ಮಾರ್ಚ್‌ನಲ್ಲಿ ವಂಜಾರಾ ಮತ್ತು ಅಮೀನ್ ವಿರುದ್ಧ ವಿಚಾರಣೆಗೆ ಸರ್ಕಾರ ಅನುಮತಿ ನಿರಾಕರಿಸಿದಾಗ, ಈ ಅಧಿಕಾರಿಗಳನ್ನು ‘ದೊಡ್ಡ ಸಾರ್ವಜನಿಕ ಹಿತಾಸಕ್ತಿ’ಗಾಗಿ ರಕ್ಷಿಸಬೇಕಾಗಿದೆ. ಇವರಿಗೆ ಕ್ಲೀನ್‌ಚಿಟ್‌ ನೀಡಬೇಕು. ಸಿಬಿಐ ಸಲ್ಲಿಸಿದ ದಾಖಲೆಗಳ ಅನ್ವಯ 19 ವರ್ಷದವಳಾಗಿದ್ದ ಮುಂಬೈ ಕಾಲೇಜು ಹುಡುಗಿ ಇಶ್ರತ್‌ ಜಹಾನ್‌ ಲಷ್ಕರ್‌–ಎ–ತಯಬಾ ಸಂಘಟನೆ ಸದಸ್ಯೆಯಾಗಿದ್ದಳು. ಆಕೆ ಲಷ್ಕರ್‌–ಎ–ತಯಬಾ ಸಂಘಟನೆಯ ಮಹಿಳಾ ಕಾರ್ಯಕರ್ತೆ ಎಂದು ಲಾಹೋರ್‌ ಮೂಲದ ಲಷ್ಕರ್‌–ಎ–ತಯಬಾ ಸಂಘಟನೆ ಮುಖವಾಣಿ ಘಝ್ವಾ ಟೈಮ್ಸ್‌ ಸಹ ಹೇಳಿತ್ತು’ ಎಂದು ಪತ್ರದಲ್ಲಿ ಉಲ್ಲೇಖಿಸಿತ್ತು. ಈಗ ಕೊನೆಯ ಮೂವರು ಅಧಿಕಾರಿಗಳ ವಿಚಾರಣೆಗೆ ಅನುಮತಿ ನಿರಾಕರಿಸುವಾಗ ‘ಈ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯ ಮಾತ್ರ ನಿರ್ವಹಿಸಿದ್ದಾರೆ. ಈ ಅಧಿಕಾರಿಗಳು ತಪ್ಪೆಸೆಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ’ ಎಂದು ಪತ್ರದಲ್ಲಿ ಹೇಳಿದೆ ಎಂದು ಮೂಲವೊಂದು ತಿಳಿಸಿದೆ.

2004ರ ಜೂನ್‌ನಲ್ಲಿ ಅಹಮದಾಬಾದ್‌ ಹೊರವಲಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಶ್ರತ್‌ ಜಹಾನ್‌ ಮತ್ತು ಜಾವೇದ್‌ ಶೇಖ್‌ ಜತೆಗೆ ಪಾಕಿಸ್ತಾನದವರೆನ್ನಲಾದ ಝೀಶನ್‌ ಜೋಹರ್‌ ಮತ್ತು ಅಮ್ಜದ್‌ ಅಲಿ ರಾಣಾ ಅವರನ್ನು ಹತ್ಯೆ ಮಾಡಲಾಗಿತ್ತು. ಇವರನ್ನು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು, ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಗೆ ಇವರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದರು.

ತನಿಖೆ ನಡೆಸಿದ ಸಿಬಿಐ, ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗುವ ಮುನ್ನ ಈ ನಾಲ್ವರೂ ಗುಜರಾತ್‌ ಪೊಲೀಸ್‌ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ವಶದಲ್ಲಿದ್ದರು ಎನ್ನುವುದನ್ನು ದೃಢಪಡಿಸಿತ್ತು. ಬಳಿಕ, ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ನಾಲ್ವರನ್ನು ಪೂರ್ವನಿಯೋಜಿತ ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಲಾಯಿತು ಎಂದು ಉಲ್ಲೇಖಿಸಲಾಗಿತ್ತು.

ಇದರಲ್ಲಿ ಗುಜರಾತ್ ಪೊಲೀಸ್ ಅಧಿಕಾರಿಗಳಲ್ಲದೆ, ಕೇಂದ್ರ ಗುಪ್ತಚರ ಇಲಾಖೆ ಮಾಜಿ ನಿರ್ದೇಶಕ ರಾಜೇಂದ್ರ ಕುಮಾರ್, ರಾಜೀವ್ ವಾಂಖೆಡೆ, ಟಿ. ಮಿತ್ತಲ್ ಮತ್ತು ಮುಕುಲ್ ಸಿನ್ಹಾ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಶುರುವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT