ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಚುನಾವಣಾ ಕಣಕ್ಕೆ ‘ಸಿಎಎ’ ಪ್ರವೇಶ

Last Updated 28 ಮಾರ್ಚ್ 2021, 18:55 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕೇರಳದಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಪೌರತ್ವ (ತಿದ್ದುಪಡಿ) ಕಾಯ್ದೆಯೂ (ಸಿಎಎ) ಪ್ರಚಾರದ ಮುಖ್ಯ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ಬಿಜೆಪಿ ಮತ್ತು ಸಿಪಿಎಂ, ಸಿಎಎ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿವೆ.

ಇಲ್ಲಿನ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು, ‘ಸಿಎಎ ವಿಚಾರದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಅಷ್ಟೇ ಅಲ್ಲ, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದರು.

ಇನ್ನೊಂದೆಡೆ, ಎಲ್‌ಡಿಎಫ್‌ ರ್‍ಯಾಲಿಯೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಕೇರಳದಲ್ಲಿ ಸಿಎಎಯನ್ನು ಜಾರಿ ಮಾಡಲು ಬಿಡುವುದಿಲ್ಲ. ಇದನ್ನು ನಾವು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ’ ಎಂದಿದ್ದಾರೆ.

ಸಿಎಎಯನ್ನು ವಿರೋಧಿಸಿ ಕಳೆದ ವರ್ಷ ಕೇರಳದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ‘ಈ ಕಾಯ್ದೆ ತಾರತಮ್ಯ ನೀತಿಯುಳ್ಳದ್ದು ಹಾಗೂ ಮುಸ್ಲಿಂ ವಿರೋಧಿಯಾದುದು’ ಎಂದು ಈ ಪಕ್ಷಗಳು ವಾದಿಸಿದ್ದವು.

ತನಿಖೆಗೆ ಬಿಜೆಪಿ ವಿರೋಧ

ಕೇಂದ್ರದ ತನಿಖಾ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಮುಂದಾಗಿರುವ ಕೇರಳ ಸರ್ಕಾರದ ಕ್ರಮಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಇದು ತನ್ನ ಮಾನ ಕಾಪಾಡಿಕೊಳ್ಳಲು ಕೇರಳ ಸರ್ಕಾರ ಮಾಡುತ್ತಿರುವ ಪ್ರಯತ್ನ’ ಎಂದು ಕೇಂದ್ರದ ಗೃಹಸಚಿವ ಅಮಿತ್‌ ಶಾ ಹೇಳಿದ್ದಾರೆ; ‘ಸರ್ಕಾರದ ಈ ಕ್ರಮವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವಂಥದ್ದು’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಚಿನ್ನದ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರದ ತನಿಖಾ ಸಂಸ್ಥೆಗಳು, ಅದನ್ನು ನೆಪವಾಗಿಟ್ಟುಕೊಂಡು ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ಉಂಟುಮಾಡುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿ
ರುವ ರಾಜ್ಯ ಸರ್ಕಾರವು, ಈ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಶುಕ್ರವಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಕೆಲವು ಸಚಿವರ ವಿರುದ್ಧ ಹೇಳಿಕೆ ನೀಡುವಂತೆ ಆರೋಪಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರು ದೂರನ್ನು ಸಹ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT