ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್ ಬಾಗ್ ತೆರವು ಕಾರ್ಯಾಚರಣೆ: ಹೈಕೋರ್ಟ್‌ಗೆ ಹೋಗಲು ಸುಪ್ರೀಂ ಸೂಚನೆ

Last Updated 9 ಮೇ 2022, 10:46 IST
ಅಕ್ಷರ ಗಾತ್ರ

ನವದೆಹಲಿ: ಶಾಹೀನ್‌ ಬಾಗ್‌ನ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ವಿರುದ್ಧ ಸಿಪಿಐ(ಎಂ) ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು, ರಾಜಕೀಯ ಪಕ್ಷದ ಅರ್ಜಿ ಆಧರಿಸಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠವು ದೆಹಲಿ ಹೈಕೋರ್ಟ್ ಮುಂದೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ.

‘ಸಿಪಿಐ(ಎಂ) ಏಕೆ ಅರ್ಜಿ ಸಲ್ಲಿಸುತ್ತಿದೆ? ಉಲ್ಲಂಘನೆಯಾಗುತ್ತಿರುವ ಮೂಲಭೂತ ಹಕ್ಕು ಯಾವುದು? ರಾಜಕೀಯ ಪಕ್ಷಗಳ ಇಚ್ಛೆಯಂತೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನೀವು ಹೈಕೋರ್ಟ್‌ಗೆ ಹೋಗಿ’ಎಂದು ಪೀಠ ಹೇಳಿದೆ.

ಒಂದು ವೇಳೆ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿದ್ದರೆ ಅದನ್ನು ತೆರವು ಮಾಡಬೇಕು. ಒಂದೊಮ್ಮೆ, ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದರೆ ಅರ್ಜಿದಾರರು ಹೈಕೋರ್ಟ್‌ಗೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದೇವೇಳೆ, ಪ್ರಕರಣವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

‘ಇದು ಬಹಳ ಸಮಯದಿಂದ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ, ನೋಟಿಸ್ ನೀಡಿಯೇ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

ಸಿಪಿಐ(ಎಂ) ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ ಸುರೇಂದ್ರನಾಥ್, ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ತಡೆ ನೀಡಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶಗಳನ್ನು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಸಂತ್ರಸ್ತರು ಬಂದು ಅರ್ಜಿ ಸಲ್ಲಿಸಲಿ ಎಂದು ಹೇಳಿದೆ.

‘ನನ್ನ ಮನೆ ಅನಧಿಕೃತವಾಗಿದ್ದರೂ ಅದನ್ನು ಕೆಡವಬಾರದು ಎಂದು ಇಲ್ಲಿಗೆ ಬಂದು ಹೇಳಲು ನಾವು ಯಾರಿಗೂ ಪರವಾನಗಿ ನೀಡಿಲ್ಲ. ನೀವು ಆ ಆದೇಶವನ್ನು ಇಲ್ಲಿ ಪ್ರಸ್ತಾಪಿಸಲು ಬರುವುದಿಲ್ಲ. ಅದರಲ್ಲೂ ರಾಜಕೀಯ ಪಕ್ಷಗಳ ಅರ್ಜಿ ಮೂಲಕ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT