ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ | ನಿಧಾನಗತಿಯ ಕಾಮಗಾರಿಗಳು; ರಾಜ್ಯಕ್ಕೆ ಕೇಂದ್ರದಿಂದ ಎಚ್ಚರಿಕೆ

Last Updated 19 ಆಗಸ್ಟ್ 2022, 22:29 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ವಿವಿಧ ನಗರಗಳಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ತೆವಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕೈಬಿಡಬೇಕು ಎಂದು ನಿರ್ದೇಶನ ನೀಡಿದೆ.

ಆಮೆಗತಿಯಲ್ಲಿ ಸಾಗುತ್ತಿರುವ ₹2,239 ಕೋಟಿ ವೆಚ್ಚದ 41 ಯೋಜನೆಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಈ ಪೈಕಿ ಕೆಲವು ಕಾಮಗಾರಿಗಳ ಪ್ರಗತಿ ಶೇ 1ರಿಂದ 5ರಷ್ಟು ಇದೆ. ಮಂಗಳೂರಿಲ್ಲಿ ₹34 ಕೋಟಿ ವೆಚ್ಚದ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರದ (ಎರಡನೇ ಹಂತ) ಕಾಮಗಾರಿ ಶುರುವೇ ಆಗಿಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸಿದೆ.

ಈ ಸಂಬಂಧ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್‌ ಜೋಷಿ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಆಗಸ್ಟ್‌ 16ರಂದು ಪತ್ರ ಬರೆದಿದ್ದು, ಯೋಜನೆಯ ಗಡುವು ಮುಗಿದ ಬಳಿಕ ಕೇಂದ್ರ ಸರ್ಕಾರವು ರಾಜ್ಯಕ್ಕೆ ನಯಾಪೈಸೆ ಅನುದಾನ ನೀಡುವುದಿಲ್ಲ ಎಂದುಎಚ್ಚರಿಕೆ ನೀಡಿದ್ದಾರೆ. ಅದರ ಬೆನ್ನಲ್ಲೇ, ಸ್ಮಾರ್ಟ್‌ ಸಿಟಿ ಕಾಮಗಾರಿಗಳ ವಾಸ್ತವಾಂಶದ ವರದಿಯನ್ನು ಕೂಡಲೇ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಕೇಂದ್ರದ ಪತ್ರದಲ್ಲಿ ಏನಿದೆ:ಸ್ಮಾರ್ಟ್‌ ಸಿಟಿ ಮಿಷನ್‌ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಮಿಷನ್‌ಗೆ2015ಕ್ಕೆ ಚಾಲನೆ ನೀಡಲಾಗಿದ್ದು, ಏಳು ವರ್ಷಗಳಲ್ಲಿ ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಈ ಮಿಷನ್‌ 2023ರ ಜೂನ್‌ಗೆ ಮುಗಿಯಲಿದೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು 11 ತಿಂಗಳುಗಳಷ್ಟೇ ಉಳಿದಿವೆ.

ಕರ್ನಾಟಕದಲ್ಲಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅನುದಾನದ ನೆರವಿನಿಂದ ಇಲ್ಲಿಯವರೆಗೆ ₹2,035 ಕೋಟಿ ಮೊತ್ತದ 395 ಕಾಮಗಾರಿ ಗಳನ್ನು ಪೂರ್ಣಗೊಳಿಸಲಾಗಿದೆ. ₹4,885 ಕೋಟಿ ಮೊತ್ತದ 252 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಕೆಲವು ಯೋಜನೆಗಳು ಕನಿಷ್ಠ ಪ್ರಗತಿ ಸಾಧಿಸಿದ್ದು, 2023ರ ಜೂನ್‌ ತಿಂಗಳ ಗಡುವಿನೊಳಗೆ ಪೂರ್ಣಗೊಳ್ಳುವುದು ಅನುಮಾನ. ಗಡುವು ಪೂರ್ಣಗೊಂಡ ಬಳಿಕ ಕೇಂದ್ರದ ಪಾಲಿನ ಅನುದಾನ ಸ್ಥಗಿತಗೊಳಿಸಲಾಗುತ್ತದೆ. ಎಲ್ಲ ಮೊತ್ತವನ್ನು ರಾಜ್ಯ ಸರ್ಕಾರವೇಭರಿಸಬೇಕಾಗುತ್ತದೆ.

ಹೀಗಾಗಿ, ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಇದರಿಂದಾಗಿ, ರಾಜ್ಯದ ಜನರಿಗೂ ಅನುಕೂಲವಾಗು ತ್ತದೆ. ರಾಜ್ಯದ ಸ್ಮಾರ್ಟ್‌ ಸಿಟಿ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ, ಅವುಗಳನ್ನು ಕೈಬಿಡುವ, ಪೂರ್ಣ ಗೊಳಿಸುವ ಅಥವಾ ಬೇರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಅಂತಿಮ ಪಟ್ಟಿಯನ್ನು ಆಗಸ್ಟ್‌ 25ರೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮನೋಜ್‌ ಜೋಷಿ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT